ಬೆಂಗಳೂರು ಆಗಸ್ಟ್ 30: ಸೆಪ್ಟೆಂಬರ್ 2 ರಿಂದ 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ದಶಕಗಳಿಂದ ಬಾಕಿ ಉಳಿದಿರುವ ಪೋಡಿ ದುರಸ್ಥಿ ಕಾರ್ಯಕ್ಕೆ ಚುರುಕು ನೀಡುವ ಸಂಬಂಧ ವಿಕಾಸಸೌಧದಲ್ಲಿ ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಂದಾಯ ನಿರೀಕ್ಷಕರೂ ಸೇರಿ ಇಲಾಖೆಯ ಎಲ್ಲಾ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಕೃಷ್ಣ ಬೈರೇಗೌಡ ಅವರು ಸಭೆ ನಡೆಸಿದರು.
“ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದ್ದರೂ ಸಹ, ಪೋಡಿ ದುರಸ್ಥಿ ಆಗದೆ ಬಾಕಿ ಉಳಿದಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಹ, ಕೆಲವೇ ಕೆಲವರಿಗೆ ಮಾತ್ರ ಪೋಡಿ ದುರಸ್ಥಿಯಾಗಿದ್ದು ಬಹುತೇಕರಿಗೆ ಆಗಿರುವುದಿಲ್ಲ. ಇದರಿಂದಾಗಿ ಹಲವು ರೈತರು ತೀವ್ರ ತೊಂದರೆಗೆ ಸಿಲುಕಿದ್ದು, ಅಧಿಕಾರಿಗಳು ಸೆಪ್ಟೆಂಬರ್ 2 ರಿಂದ ಅಭಿಯಾನ ಮಾದರಿಯಲ್ಲಿ 1-5 ನಮೂನೆ ಪೋಡಿ ದುರಸ್ಥಿ ಕೆಲಸಕ್ಕೆ ಮುಂದಾಗಬೇಕು, ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಸೂಚಿಸಿದರು.
ಮುಂದುವರೆದು, “ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ, ಅಂತಹ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲ್ಲೂಕು ಕಛೇರಿ, ಸರ್ವೆ ಕಛೇರಿಗಳಿಗೆ ಅಲೆದು ಅಲೆದು ಪ್ರಯೋಜನವಾಗದೆ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ.