ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಶೇ 80ರಷ್ಟು ರೈತರು ಈಗಾಗಲೇ ರಾಶಿ ಮಾಡಿದ್ದಾರೆ. ಲಕ್ಷಾಂತರ ಕ್ವಿಂಟಲ್ ಹೆಸರುಕಾಳು ಸಿದ್ಧಗೊಂಡಿದೆ. ಆದರೆ, ದರ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಜಿಲ್ಲಾಡಳಿತ ಯಾವಾಗ ಖರೀದಿ ಕೇಂದ್ರ ತೆರೆಯುವುದೋ ಎಂದು ರೈತರು ಕಾದು ಕುಳಿತಿದ್ದಾರೆ.
ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ತುಂಬ ಹದವಾಗಿ ಬಿದ್ದಿದೆ. ಪರಿಣಾಮ ಪ್ರತಿ ವರ್ಷಕ್ಕಿಂತ ಈಗ ಹೆಸರು ಬೆಳೆ ಅತ್ಯಂತ ಫಲಪ್ರದವಾಗಿದೆ. ಕಳೆದ ವರ್ಷ ಭೀಕರ ಬರಗಾಲ ಎದುರಿಸಬೇಕಾಯಿತು. ಹೆಸರು ಬೆಳೆದ ಸಾವಿರಾರು ರೈತರು ಈಗಲಾದರೂ ಕಷ್ಟ ದೂರವಾಯಿತು ಎಂಬ ಖುಷಿಯಲ್ಲಿದ್ದಾರೆ. ಆದರೆ, ನಿರಂತರ ಕುಸಿತ ಕಂಡ ದರ ಅವರನ್ನು ಕಂಗಾಲು ಮಾಡಿದೆ.
‘ಮಾರುಕಟ್ಟೆಯಲ್ಲಿ ಹೆಸರು ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹4,000ರಿಂದ ಗರಿಷ್ಠ ₹ 6,500 ದರವಿದೆ. ಚಿಲ್ಲರೆ ಮಾರಾಟದಲ್ಲಿ ಈ ದರ ಇನ್ನೂ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ₹8,580ರಿಂದ ₹10 ಸಾವಿರ ಇತ್ತು. ಈಗ ಅರ್ಧದಷ್ಟು ಕುಸಿದಿದೆ’ ಎಂಬ ಕೂಗು ರೈತರದ್ದು.
‘ಈ ಬಾರಿ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ₹8,682 ದರ ನಿಗದಿಪಡಿಸಿದೆ. ಆದರೆ, ಖರೀದಿ ಕೇಂದ್ರ ಇನ್ನೂ ತೆರೆದಿಲ್ಲ. ರಾಜ್ಯ ಸರ್ಕಾರದಿಂದ ಸೂಚನೆ ಬಂದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಆದರೆ, ಇಲ್ಲಿಯೂ ಹೆಚ್ಚಿನ ಪ್ರಮಾಣದ ರೈತರು ಆರಂಭಿಕ ಬೆಳೆಯಾಗಿ ಹೆಸರು ಬಿತ್ತುತ್ತಾರೆ. ಜಿಲ್ಲಾಡಳಿತ ಗಮನಿಸಬೇಕು’ ಎಂಬುದು ಅವರು ಆಗ್ರಹ.
‘ಪ್ರತಿ ಎಕರೆಗೆ 4ರಿಂದ 5 ಕ್ವಿಂಟಲ್ ಹೆಸರು ಇಳುವರಿ ಬರುತ್ತದೆ. ಎಕರೆ ಬಿತ್ತನೆಗೆ ಒಟ್ಟಾರೆ ₹20 ಸಾವಿರ ಖರ್ಚಾಗುತ್ತದೆ. ಸದ್ಯ ದಲ್ಲಾಳಿಗಳ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹4,000 ಮಾರಾಟವಾಗುತ್ತಿದೆ. ರೈತರು ಬಿತ್ತಲು- ಬೆಳೆಯಲು ಹಾಕಿದ ಹಣ ಕೂಡ ಮರಳಿ ಬರುತ್ತಿಲ್ಲ’ ಎನ್ನುತ್ತಾರೆ ಅವರು.