ರಾಮದುರ್ಗ: ‘ವೀರಶೈವ ಲಿಂಗಾಯತ ಒಳಪಂಗಡಗಳು ಸಮಾಜದ ಪ್ರತಿಭಾವಂತರಿಗೆ ಹಾಗೂ ಸಾಧಕರಿಗೆ ಪ್ರೋತ್ಸಾಹಿಸಲು ಪ್ರೇರಣೆ ನೀಡಬೇಕು’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿನ ಕರ್ನಾಟಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಸರ್ಕಾರದ ಸೌಲಭ್ಯಕ್ಕಾದರೂ ಲಿಂಗಾಯತ ಸಮಾಜವನ್ನು ಒಟ್ಟಾಗಿಸುವ ಕಾರ್ಯ ಮಾಡಬೇಕು’ ಎಂದರು.
‘ರಾಜ್ಯದಲ್ಲಿ ಬಣಜಿಗ ಸಮಾಜದ ಎಲ್ಲ ತಾಲ್ಲೂಕು ಘಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಆದರೆ ರಾಜ್ಯ ಘಟಕದ ಸಂಘಟನೆಯಲ್ಲಿ ಕೊರತೆ ಇದೆ. ಅದನ್ನು ಶೀಘ್ರದಲ್ಲಿ ಶಮನಗೊಳಿಸಿ ರಾಜ್ಯದಲ್ಲಿ ಮತ್ತೆ ಸಂಘಟನೆಗೆ ಚುರುಕುಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
‘ಬೆಳಗಾವಿ ಜನ ಹುಬ್ಬಳ್ಳಿಯಿಂದ ಬಂದ ನನಗೆ ಆಶಿರ್ವಾದ ಮಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ದಿ.ಸುರೇಶ ಅಂಗಡಿಯವರ ಕಾರ್ಯಗಳನ್ನು ಪೂರ್ತಿಗೊಳಿಸಿ ಧಾರವಾಡ- ಬೆಳಗಾವಿ ರೈಲು ಸಂಪರ್ಕ ಕೆಲಸ ಮತ್ತು ಸವದತ್ತಿ ಹಾಗೂ ರಾಮದುರ್ಗಕ್ಕೆ ರೈಲು ಸಂಪರ್ಕ ಕಲ್ಪಿಸಲು ಕೇಂದ್ರ ರೇಲ್ವೆ ಸಚಿವರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.