ಹುಬ್ಬಳ್ಳಿ: ಈ ನಗರದ ಬೀದಿಗೆ ಕಾಲಿಟ್ಟರೆ ಸಾಕು ದುರ್ವಾಸನೆ ಮೂಗಿಗೆ ಅಸಹನೀಯವಾಗುತ್ತದೆ. ಮನೆ ಮುಂದೆ ಬಾಯ್ತೆರೆದ ದೊಡ್ಡ ಚರಂಡಿ ನಾಲಾ. ಚರಂಡಿ ಪಕ್ಕದಲ್ಲೇ ಆಡುವ ಮಕ್ಕಳು. ಸಂಜೆ ವಿಪರೀತ ಸೊಳ್ಳೆಗಳ ಕಾಟ..
ಈ ದುಸ್ಥಿತಿಯ ಚಿತ್ರಣವನ್ನು ಹಳೇಹುಬ್ಬಳ್ಳಿಯ ಹೆಗ್ಗೇರಿಯಲ್ಲಿ ಕಾಣಬಹುದು.
ನಗರದ ಮಧ್ಯಭಾಗದಲ್ಲಿರುವ ಈ ಬಡಾವಣೆ ಸಮಸ್ಯೆಗಳ ಸರಮಾಲೆ ಹೊದ್ದು ಕೂತಿದೆ. 2 ಸಾವಿರಕ್ಕೂ ಹೆಚ್ಚು ಜನ ವಾಸಿಸುವ ಈ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲ. ಮನೆ ಎದುರೇ ಬೀಳುವ ತ್ಯಾಜ್ಯ, ಮನೆ ಮುಂದೆ ಮಲಮೂತ್ರ ವಿಸರ್ಜನೆ ಮಾಡುವ ಮಕ್ಕಳು, ಸರಿಯಾದ ಚರಂಡಿ ವ್ಯವಸ್ಥೆ ಇದ್ದರೂ ನಿರ್ವಹಣೆ ಇಲ್ಲ.
ಆರು ತಿಂಗಳ ಹಿಂದೆ ದೊಡ್ಡದಾದ ಚರಂಡಿ ನಾಲಾ ನಿರ್ಮಿಸಿದ್ದಾರೆ. ಅದಕ್ಕೆ ಮೇಲ್ಚಾವಣಿ ಹಾಕದೆ ಹಾಗೇ ಬಿಟ್ಟಿದ್ದರಿಂದ ಆತಂಕದಲ್ಲಿ ಇಲ್ಲಿನ ಜನರು ದಿನ ದೂಡುವಂತಾಗಿದೆ. ಅಷ್ಟೇ ಅಲ್ಲದೆ ರಸ್ತೆ ಪಕ್ಕದಲ್ಲೂ ಕಸ ಬೀಳುತ್ತಿದ್ದು, ಅರ್ಧ ಭಾಗದಷ್ಟು ರಸ್ತೆ ಕಸದಿಂದ ತುಂಬಿರುತ್ತದೆ. ಪಕ್ಕದಲ್ಲಿಯೇ ಮಕ್ಕಳ ಆಟಕ್ಕೆ ನಿರ್ಮಿಸಿದ ಪಾರ್ಕ್ ಇದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಹಾಳಾದ ಆಸನಗಳು, ಉದ್ಯಾನದ ತುಂಬಾ ಕಸ ಬೆಳೆದಿದ್ದು, ಓಡಾಡಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ.
‘ನಮ್ಮ ಮನೆ ಎದುರು ಚರಂಡಿ ನಿರ್ಮಿಸಿದ್ದಾರೆ. ಮೇಲ್ಚಾವಣಿ ಹಾಕಿದ್ದರು ಆದರೆ ರಸ್ತೆ ಕಾಮಗಾರಿ ಮಾಡುವಾಗ ಅದನ್ನು ತೆಗೆದು ಹಾಕಿದ್ದಾರೆ. ಚರಂಡಿ ಇರುವ ಮನೆ ಬಾಗಿಲನ್ನು ತೆರೆಯಲು ಹಿಂದೇಟು ಹಾಕುವಂತಾಗಿದೆ. ಅಷ್ಟೇ ಅಲ್ಲದೆ ನೀರಿನ ಪೈಪ್‌ಲೈನ್ ಒಡೆದಿದ್ದು, ಇನ್ನುವರೆಗೂ ಸರಿ ಮಾಡಿಲ್ಲ’ ಎಂದು ನಿವಾಸಿ ರಾಜಮ್ಮ ವಾಟಕರ ಹೇಳಿದರು.
‘ಮನೆ ಹಿಂದೆಯೇ ದೊಡ್ಡದಾಡ ಚರಂಡಿ ನಾಲಾ ನಿರ್ಮಿಸಿದ್ದಾರೆ. ಇದರಿಂದ ನಿತ್ಯ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಪಾಗಿಂಗ್ ಕೂಡಾ ಮಾಡಿಲ್ಲ. ಮನೆಯಲ್ಲಿ ಮಕ್ಕಳು ಇರುವುದರಿಂದ ನಾವೇ ಸುರಕ್ಷತೆ ದೃಷ್ಟಿಯಿಂದ ಕಟ್ಟಿಗೆಯ ಪ್ಲಾವಿಡ್ ಹಾಕಿಕೊಂಡಿದ್ದೇವೆ. ಸೊಳ್ಳೆಗ ಕಾಟವಂತೂ ವಿಪರೀತವಾಗಿದೆ’ ಎಂದು ನಿವಾಸಿ ಸುಪ್ರಿಯಾ ಟೋಪಣ್ಣವರ ತಿಳಿಸಿದರು.