Breaking News

ಸಚಿವ ಎಚ್‌ಡಿಕೆ ಮತ್ತು ಸಂಬಂಧಿಕರಿಂದ ಗೋಮಾಳ ಜಾಗ ಕಬಳಿಕೆ; ಹಿರೇಮಠ ಆರೋಪ

Spread the love

ಧಾರವಾಡ: ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಗೋಮಾಳದ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್‌.ಆರ್‌.ಹಿರೇಮಠ ಆರೋಪಿಸಿದರು.

 

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕುಮಾರಸ್ವಾಮಿ, ಅವರ ಚಿಕ್ಕಮ್ಮ ಸಾವಿತ್ರಮ್ಮ ಹಾಗೂ ಸಂಬಂಧಿಕ ಡಿ.ಸಿ.ತಮ್ಮಣ್ಣ ಕುಟುಂಬದವ‌ರು ಜಾಗವನ್ನು ಕಬಳಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಂದಾಯ ಇಲಾಖೆಯ ಉನ್ನತಧಿಕಾರಿ 2014 ಆಗಸ್ಟ್‌ 5ರಂದು ಆದೇಶಿಸಿದ್ದರು ಎಂದು ತಿಳಿಸಿದರು.

‘ಗೋಮಾಳ ಜಾಗ ಮಂಜೂರಾತಿ ದಾಖಲಾತಿಗಳು ಸಿಗದಿದ್ದರೆ ಸುಪರ್ದಿಯಲ್ಲಿರುವವರ ವಿರುದ್ಧ ನೋಟಿಸ್‌ ಜಾರಿಗೊಳಿಸಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಬೇಕು. ಅಕ್ರಮವಾಗಿ ಜಾಗ ಪಡೆದವರ ವಿರುದ್ಧ ಕ್ರಿಮಿನಿಲ್‌ ಪ್ರಕರಣ ದಾಖಲಿಸಬೇಕು. ಒತ್ತುವರಿದಾರರಿಗೆ ಸಹಕರಿಸಿರುವ ನೌಕರರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ನಾಲ್ಕು ತಿಂಗಳೊಳಗೆ ತನಿಖೆ ಮುಗಿಸಿ ಕ್ರಮಕೈಗೊಂಡು ಅನುಪಾಲನಾ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿತ್ತು’ ಎಂದರು.

‘ಮಾಜಿ ಸಂಸದ ಜಿ.ಮಾದೇಗೌಡ ಅವರಿಂದ ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದೆವು. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದೇವೆ’ ಎಂದು ತಿಳಿಸಿದರು.

ಕೆಆರ್‌ಎಸ್‌ ಪಕ್ಷದ ರವಿಕೃಷ್ಣಾ ರೆಡ್ಡಿ ಮಾತನಾಡಿ, ‘ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರು ಅಕ್ರಮವಾಗಿ ಕಬಳಿಸಿರುವ ದಾಖಲೆಗಳಿರುವ ‘ದಾಖಲೆಗಳು ಮಾತಾಡುತ್ತಿವೆ’ ಪುಸ್ತಕ ಬಿಡುಗಡೆಗೊಳಿಸಿದ್ದೇವೆ. ಇ.ಡಿ ಹಗರಣದ ವಿವರಣೆ ಈ ಪುಸ್ತಕದಲ್ಲಿ ಇದೆ. ಎಚ್‌.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ಹಾಗೂ ಅವರ ಹತ್ತಿರದ ಸಂಬಂಧಿ ಡಿ.ಸಿ.ತಮ್ಮಣ್ಣ ಮತ್ತು ಅವರು ಕುಟುಂಬದವರು ಅಕ್ರಮವಾಗಿ ಕಬಳಿಸಿರುವ 110 ಎಕರೆ ಗೋಮಾಳ ಸಹಿತ 200 ಎಕರೆ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತಮಟ್ಟದ ತನಿಖೆ ನಡೆಸಿ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು 2014ರ ಆಗಸ್ಟ್‌ 25ರಂದು ರಾಮನಗರ ಉಪವಿಭಾಗಧಿಕಾರಿ ಬರೆದಿರುವ ಒಕ್ಕಣೆ ಪುಸ್ತಕದಲ್ಲಿದೆ’ ಎಂದು ತಿಳಿಸಿದರು.

‘ಸುಮಾರು 40 ವರ್ಷಗಳ ಹಿಂದೆ ನಡೆದ ಭೂಕಬಳಿಕೆ ಇದು. ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಅವರು ವಾಸ ಇರುವ ಮನೆ, ತೋಟ ಎಲ್ಲವೂ ಅಕ್ರಮವಾಗಿ ಕಬಳಿಸಿರುವುದು. ಬಿಜೆಪಿ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಅವರ ಜಮೀನು ಕೇತಗಾನಹಳ್ಳಿಯಲ್ಲಿ ಇದೆ. ಅಫಿಡವಿಟ್‌ನಲ್ಲಿ ಅದನ್ನು ಘೋಷಣೆ ಮಾಡಿಕೊಂಡಿದ್ಧಾರೆ. ಈ ಜಮೀನು ಗೋಮಾಳಕ್ಕೆ ಸಂಬಂಧಿಸಿದ್ದು. ಈ ಜಾಗದ ಕುರಿತೂ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ