ಬೆಂಗಳೂರು: ಮುಡಾ ಪ್ರಕರಣ ದಲ್ಲಿ ಸಿಎಂ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಸಿಎಂ ಪರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆ.
22ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ, “ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಯಾವುದೇ ಪ್ರಮಾದ ಮಾಡಿಲ್ಲ. ಆದರೂ ಸರಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆದಿದೆ. ಈ ಸಂದರ್ಭದಲ್ಲಿ ಸರಕಾರ ಮತ್ತು ಪಕ್ಷ ಒಗ್ಗಟ್ಟು ಪ್ರದರ್ಶಿಸಬೇಕು. ಜತೆಗೆ ಪ್ರತಿತಂತ್ರ ರೂಪಿಸಿ ವಿಪಕ್ಷಗಳಿಗೆ ತಿರುಗೇಟು ನೀಡಬೇಕು’ ಎಂಬ ಸಂದೇಶ ರವಾನಿಸಲು ಉದ್ದೇಶಿಸಲಾಗಿದೆ.
ವಿಪಕ್ಷ ಬಿಜೆಪಿಯು ಜನಾದೇಶವನ್ನು ಧಿಕ್ಕರಿಸಿ ಸರಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಸುತ್ತ ಬಂದಿದೆ, ಹಿಂಬಾಗಿಲಿನ ರಾಜಕಾರಣಕ್ಕೆ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹಿಂದಿನಿಂದಲೂ ಆರೋಪಿಸು ತ್ತಲೇ ಬಂದಿದ್ದಾರೆ. ಈಗ ಸಿಎಂ ವಿರುದ್ಧವೇ ಅಭಿಯೋಜನೆಗೆ ಅನು ಮತಿ ನೀಡಿದ ಸಂದರ್ಭದಲ್ಲಿ ಕರೆ ದಿರುವ ಈ ಶಾಸಕಾಂಗ ಪಕ್ಷದ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಮೊದಲೇ ವಿವಿಧ ವೇದಿಕೆಗಳ ಮೂಲಕ ಸಿಎಂ ಪರ ಒಗ್ಗಟ್ಟು ಪ್ರದರ್ಶನ ನಡೆದಿದೆ. ಆ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಬಣಗಳು ಆಚೀಚೆ ಜಿಗಿಯುವ ಸಾಧ್ಯತೆ ಇದೆ. ಪಕ್ಷದಲ್ಲಿ ಭಿನ್ನರಾಗಗಳನ್ನೇ ಎದುರು ನೋಡುತ್ತಿರುವ ವಿಪಕ್ಷಗಳಿಗೆ ಇದು ಆಹಾರವೂ ಆಗಬಹುದು. ಆಗ ಸರಕಾರವನ್ನು ಅಸ್ಥಿರಗೊಳಿಸುವ ಯತ್ನಕ್ಕೆ ಅವಕಾಶ ಕೊಟ್ಟಂತಾಗುತ್ತದೆ.
ಹಾಗಾಗಿ ಸಿಎಂ ಪರ ಎಲ್ಲರೂ ಒಗ್ಗಟ್ಟಿನ ಮಂತ್ರ ಪಠಿಸಲು ಸಭೆ ಕರೆಯಲಾಗಿದೆ. ಅಲ್ಲದೆ ಎದುರಾಳಿಗಳ ಅಸ್ತ್ರಕ್ಕೆ ಪ್ರತಿತಂತ್ರವಾಗಿ ತಮ್ಮ ಕ್ಷೇತ್ರಗಳಲ್ಲಿ ಶಾಸಕರು ಹೋರಾಟ ರೂಪಿಸಿ ಜನರಿಗೆ ಮನದಟ್ಟು ಮಾಡಿಕೊಡುವ ಗುರಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.