ಮಂಡ್ಯ, ಆಗಸ್ಟ್ 19: ಮನೆಯಲ್ಲಿ ಹೆಣ್ಣು ಮಕ್ಕಳ ಕೈಗೆ ಸಂಪತ್ತಿನ ಕೀಲಿಯನ್ನು ಕೊಟ್ಟದ್ದೇ ಆದರೆ ಮನೆಯೂ ಉದ್ದಾರವಾಗುತ್ತದೆ ದೇಶವೂ ಉದ್ಧಾರವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಹೇಳಿದರು.
ನಾಗಮಂಗಲ ತಾಲೂಕಿನ ಕಂಚನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮನೆಯಲ್ಲಿರುವ ಹೆಣ್ಣು ಮಕ್ಕಳು ದೇಶಕಟ್ಟುವ ಕಾಯಕಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಮಾಜಿಕ ವ್ಯವಸ್ಥೆ ಬಿಡುವುದಿಲ್ಲವೋ ಅಲ್ಲಿಯವರಗೆ ದೇಶದ ಉದ್ದಾರವಾಗದು ಎಂದರು.
ನಮ್ಮ ದೇಶದ ಹೆಣ್ಣು ಮಕ್ಕಳು ವಿದ್ಯಾಭ್ಯಾಸದ ನಂತರ ಮನೆಯಲ್ಲಿ ಅಡುಗೆ ಮಾಡಿಕೊಂಡು ಕೂರದೆ ಹೊರಬಂದು ದೇಶವನ್ನು ಕಟ್ಟುವ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರೆ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಅವರ ಸಾಮಾನ್ಯ ಜ್ಞಾನ ಶಕ್ತಿಯನ್ನು ಉಪಯೋಗಿಸಿಕೊಂಡು ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡಬೇಕೆಂದು ಹಾಲು ಮತ್ತು ರೇಷ್ಮೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.
ದೇಶದ ಉದ್ಧಾರದ ಕಾಯಕದಲ್ಲಿ ಹಾಲು ಉತ್ಪಾದನೆ ಸ್ವಾವಲಂಬನೆಯನ್ನು ಕೊಟ್ಟಂತಹ ಮತ್ತು ಮನೆಯ ಆರ್ಥಿಕತೆಯ ಅಭಿವೃದ್ಧಿ ಕೊಟ್ಟಂತಹ ಕ್ಷೇತ್ರ. ಹಾಲು ಉತ್ಪಾದನೆಯ ಸಹಕಾರ ಸಂಘಗಳು ನಮ್ಮ ದೇಶಕ್ಕೆ ಬಂದ ನಂತರದಲ್ಲಿ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದಿತೆಂದರೆ ಪೋಷಕರು ತಮ್ಮ ಮಕ್ಕಳನ್ನು ಎಂತಹ ಶಾಲೆಗೆ ದಾಖಲಿಸಿ ಎಂತಹ ವಿದ್ಯೆಯನ್ನು ಕೊಡಿಸಬೇಕೆಂಬ ಸ್ವಾತಂತ್ರ್ಯ ತೆಗೆದುಕೊಳ್ಳುವ ಶಕ್ತಿ ಬಂದಿದೆ. ಹಾಗಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.