ಬೆಂಗಳೂರು: ಬಿಜೆಪಿಗರನ್ನೇ (BJP) ಬಗ್ಗು ಬಡಿದು ಬಲೆ ಹಾಕ್ತೀನಿ ಎಂದಿದ್ದ ಸಿದ್ದರಾಮಯ್ಯ (Siddaramaiah) ಸೈಟ್ ಸುಳಿಗೆ ಸಿಲುಕಿ ಪರದಾಡ್ತಿದ್ದಾರೆ. ಪ್ರಾಸಿಕ್ಯೂಷನ್ (Prosecution) ಬಲೆಯಿಂದ ಹೊರಬರಲು ಕಾನೂನು ಸಮರ ಸಾರಿದ್ದಾರೆ. ಇಂದು ಸಿಎಂ ಪರ ಕಪಿಲ್ ಸಿಬಲ್ (Kapil Sibal), ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ (Abhishek Singhvi) ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸೋದಕ್ಕೆ ಸಜ್ಜಾಗಿದ್ದಾರೆ.
ಇದರ ನಡುವೆಯೇ ಸಿದ್ದರಾಮಯ್ಯ ದೆಹಲಿ ದಂಡಯಾತ್ರೆಗೆ ಮುಂದಾಗಿದ್ದಾರೆ.
ಪ್ರಾಸಿಕ್ಯೂಷನ್ ವಿರುದ್ಧ ಸಿಎಂ ಕಾನೂನು ಸಮರ
ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದೇ ಕೊಟ್ಟಿದ್ದು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯೇ ಎದ್ದಿದೆ. ಇದ್ಯಾವುದಕ್ಕೂ ತಲೆಕೆಡಿಕೊಳ್ಳದ ಸಿಎಂ ಸಿದ್ದರಾಮಯ್ಯ, ಗವರ್ನರ್ ಪ್ರಾಸಿಕ್ಯೂಷನ್ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ರಾತ್ರೋರಾತ್ರಿ ಕಾನೂನು ತಜ್ಞರ ಸಲಹೆ ಪಡೆದ ಟಗರು ರಾಜಕೀಯವಾಗಿ, ಕಾನೂನಾತ್ಮಕ ಹೋರಾಟಕ್ಕೆ ಸೆಟೆದು ನಿಂತಿದೆ. ರಾಜ್ಯಪಾಲರ ವಿರುದ್ಧವೇ ಕಾನೂನು ಸಮರ ಸಾರೋದಕ್ಕೆ ರಣಬಲೆ ಹೆಣೆದಿದ್ದು, ಪ್ರಾಸಿಕ್ಯೂಷನ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಹೀಗಾಗಿಯೇ ದೆಹಲಿಯಿಂದ ಆಗಮಿಸಿ ಇಂದು ಸಿಎಂ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಸಿಬಲ್ ಹೈಕೋರ್ಟ್ ಅರ್ಜಿ ಸಲ್ಲಿಸಲಿದ್ದಾರೆ. ಇದ್ರಿಂದ ಮಂತ್ರಾಲಯ ಪ್ರವಾಸವನ್ನೂ ರದ್ದು ಮಾಡಿ ಕಾನೂನು ಯುದ್ಧಕ್ಕೆ ಸಿದ್ಧವಾಗಿದ್ದಾರೆ ಸಿದ್ದರಾಮಯ್ಯ.
ಸಿಎಂ ಸಿದ್ದರಾಮಯ್ಯ ವಿರುದ್ಧ ಸೆಕ್ಷನ್ 17A, ಸೆಕ್ಷನ್ 218 ಅಡಿಯಲ್ಲಿ ತನಿಖೆಗೆ ಅನುಮತಿ ನೀಡಲಾಗಿದೆ. ಹಾಗಾದರೆ, ಈ ಎರಡು ಸೆಕ್ಷನ್ ಏನ್ ಹೇಳ್ತಾವೆ ಅಂತ ನೋಡೋದಾದರೆ..
ಸೆಕ್ಷನ್ 17A ಹೇಳೋದೇನು?
ಸೆಕ್ಷನ್ 17A ಅಂದ್ರೆ ಬೇರೇನೂ ಅಲ್ಲ. ಜನಪ್ರತಿನಿಧಿಗಳ ತನಿಖೆಗಾಗಿ ಇರುವಂತಾ ಕಾನೂನು. ಈ ಸೆಕ್ಷನ್ ಅಡಿಯಲ್ಲಿ ನೇರವಾಗಿ ಪೊಲೀಸರಿಂದ ತನಿಖೆ ನಡೆಯೋದು ಅಸಾಧ್ಯ. ಅಂದ್ರೆ ನೇರವಾಗಿ ಲೋಕಾಯುಕ್ತ, CID, SIT ತನಿಖೆ ನಡೆಸಲು ಆಗಲ್ಲ. ಗವರ್ನರ್ ಅನುಮತಿ ಮೇರೆಗೆ ಮಾತ್ರ ತನಿಖೆ ನಡೆಸ್ಬೋದು. ಭ್ರಷ್ಟಾಚಾರ, ಕ್ರಿಮಿನಲ್, ಇತರೆ ಕೇಸ್‌ಗಳ ಬಗ್ಗೆ ತನಿಖೆ ನಡೆಯಲಿದೆ.
ಸೆಕ್ಷನ್ 218 ಏನ್ಹೇಳುತ್ತೆ?
ಸೆಕ್ಷನ್ 218 ಅಂದ್ರೆ ಜನಪ್ರತಿನಿಧಿಗಳ ತನಿಖೆಗೆ ಇರುವಂತಾ ಕಾನೂನು. ಭ್ರಷ್ಟಾಚಾರ ಕೇಸ್‌ನಲ್ಲಿ ರಕ್ಷಣೆ ಆರೋಪ ಬಂದಾಗ ಈ ಸೆಕ್ಷನ್ ಅಡಿಯಲ್ಲಿ ತನಿಖೆ ನಡೆಸಲಾಗುತ್ತೆ. ಅಲ್ಲದೆ ದಾಖಲೆ ತಿದ್ದುಪಡಿ ಮಾಡಿ ಮೋಸ ಮಾಡಿದ ಆರೋಪ ಕೇಳಿ ಬಂದ್ರೆ, ಅಕ್ರಮವಾಗಿ ಆಸ್ತಿ ವರ್ಗಾವಣೆ, ಪರಭಾರೆ ಮಾಡಿದ ಆರೋಪವಿದ್ದಾಗ ಹಾಗೆಯೇ ಸಾರ್ವಜನಿಕ ಆಸ್ತಿ ದುರುಪಯೋಗ ಮಾಡ್ಕೊಂಡ ಆರೋಪ ಕೇಳಿ ಬಂದಾಗ ಈ ಸೆಕ್ಷನ್ ಅಡಿಯಲ್ಲಿ ತನಿಖೆ ನಡೆಸ್ಬೋದು. ಅಪರಾಧ ಸಾಬೀತಾದ್ರೆ 6 ತಿಂಗಳು ಶಿಕ್ಷೆ ಜೊತೆಗೆ 10 ಸಾವಿರ ದಂಡವನ್ನೂ ವಿಧಿಸೋ ಸಾಧ್ಯತೆ ಇದೆ.