ಬೆಳಗಾವಿ: ನಗರಕ್ಕೆ ಪ್ರವಾಸಿ ಭವನ ಮಂಜೂರಾಗಿ ಆರು ವರ್ಷ ಕಳೆದಿದೆ. ಆದರೆ, ಕಾಮಗಾರಿ ಕೈಗೊಳ್ಳಲು ಇಂದಿಗೂ ಜಾಗವೇ ಸಿಕ್ಕಿಲ್ಲ.
ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ಬೆಳಗಾವಿಯಲ್ಲಿ ಸ್ವಂತ ಕಟ್ಟಡವಿಲ್ಲ. ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲು ಸೂಕ್ತ ವ್ಯವಸ್ಥೆಯೂ ಇಲ್ಲ.
ಇದಕ್ಕೆ ಪರಿಹಾರ ಒದಗಿಸಲೆಂದು ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ ಬೆಳಗಾವಿಗೆ ಪ್ರವಾಸಿ ಭವನ ಮಂಜೂರುಗೊಳಿಸಿ, ₹2 ಕೋಟಿ ಅನುದಾನ ಘೋಷಿಸಿತ್ತು. ಪ್ರಥಮ ಹಂತವಾಗಿ ₹1 ಕೋಟಿ ಬಿಡುಗಡೆಗೊಳಿಸಿತ್ತು. ಆದರೆ, ಜಾಗದ ಅಲಭ್ಯತೆಯಿಂದ ಕಾಮಗಾರಿಯೇ ಹಿನ್ನಡೆಯಾಗಿದೆ.
‘ಬೆಳಗಾವಿಯಲ್ಲಿ ನಿರ್ಮಾಣವಾಗಲಿರುವ ಪ್ರವಾಸಿ ಭವನದಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಕಚೇರಿ, ಉಪ ನಿರ್ದೇಶಕರ ಕಚೇರಿ, ಇನ್‌ಫಾರ್ಮೇಷನ್ ಕಿಯಾಸ್ಕ್, ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಬಲ್ಲ ಮ್ಯೂಸಿಯಂ, ಕಾನ್ಫರೆನ್ಸ್ ಹಾಲ್ ಮತ್ತಿತರ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದೆವು. ಆದರೆ, ಸೂಕ್ತ ಜಾಗ ಸಿಗದ್ದರಿಂದ ಕಾಮಗಾರಿ ಆರಂಭಿಸಲಾಗಿಲ್ಲ’ ಎಂದು ಅಧಿಕಾರಿಗಳು ‘ ತಿಳಿಸಿದರು.