ಬೆಂಗಳೂರು : 2023-24ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಸಹಶಿಕ್ಷಕರು, ದೈಹಿಕ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರುಗಳಿಗೆ ಅಂತರ್ ವಿಭಾಗ ಮಟ್ಟದ ಕೋರಿಕೆ/ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 [2020ರ ಕರ್ನಾಟಕ ಅಧಿನಿಯಮ ಸಂಖ್ಯೆ: 04] ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ನಿಯಮಗಳಂತೆ, ಹಾಗೂ ವರ್ಗಾವಣಾ ತಿದ್ದುಪಡಿ ಕಾಯ್ದೆ ಮತ್ತು ನಿಯಮ-2022ರ ಪ್ರಕಾರ ಉಲ್ಲೇಖ-1ರಲ್ಲಿನ ಮಾರ್ಗಸೂಚಿಯನ್ವಯ ಅಂತರ ವಿಭಾಗ ಮಟ್ಟದ ವರ್ಗಾವಣಾ ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ವರ್ಗಾವಣಾ ಕೌನ್ಸಿಲಿಂಗ್ ಪ್ರಕ್ರಿಯೆಯು ರೌಂಡ್ ರೋಬಿನ್ ನಂತೆ ನಿಗಧಿತ ದಿನಗಳಂದು ಬೆಳಿಗ್ಗೆ 9-00 ರಿಂದ ಸಂಜೆ 7-00 ಗಂಟೆಯವರೆಗೆ ನಿರಂತರವಾಗಿ ನಡೆಯಲಿದ್ದು ಈಗಾಗಲೇ ಪ್ರಕಟಿಸಲಾಗಿರುವ ಆಧ್ಯತಾ ಪಟ್ಟಿಯಲ್ಲಿರುವ ಶಿಕ್ಷಕರು ಪ್ರಸ್ತುತ ಕರ್ತವ್ಯ ನಿರತ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ಇವರ ಕಛೇರಿಯಲ್ಲಿ ನಿಗಧಿತ ದಿನಾಂಕದಂದು ಪೂರಕ ಮೂಲ ದಾಖಲೆಗಳ ಸಹಿತ ಖುದ್ದಾಗಿ ಹಾಜರಿದ್ದು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿ ಸ್ಥಳ ಆಯ್ಕೆ ಮಾಡಿಕೊಳ್ಳಲು ತಿಳಿಸಿದೆ.
ವರ್ಗಾವಣಾ ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ತಮ್ಮ ವ್ಯಾಪ್ತಿಯ ಶಿಕ್ಷಕರ ಗಮನಕ್ಕೆ ತರಲು ವ್ಯಾಪಕ ಪ್ರಚಾರ ಕೈಗೊಳ್ಳಲು ಹಾಗೂ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲು ಉಪನಿರ್ದೇಶಕರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.