ಬೆಳಗಾವಿ, ಆಗಸ್ಟ್ 14: ಉತ್ತರ ಕರ್ನಾಟಕ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ಆದರೆ ಅವುಗಳು ಪ್ರಚಾರದಲ್ಲಿ, ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿವೆ. ಈಗ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇರುವ ಪೂರಕ ಅಂಶಗಳನ್ನು ಗುರುತಿಸಿ ಅವುಗಳ ಮೇಲೆ ಹೆಚ್ಚಿನ ಗಮನ ಹರಿಸಿ, ಈ ಭಾಗದ ಪ್ರವಾಸೋದ್ಯಮದ ಚಿತ್ರಣ ಬದಲಿಸಲು ಯೋಜನೆ ರೂಪಿಸಲಾಗಿದೆ.
ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಬೆಳಗಾವಿಯ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ಮದ್ಯಸ್ಥಿಕೆಗಾರರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕಾರ್ಯದರ್ಶಿ ಮನು, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ, ಹೋಟಲ್ ಉದ್ಯಮಿ ವಿಠ್ಠಲ ಹೆಗಡೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಈ ಸಂವಾದವನ್ನು ಉದ್ಘಾಟಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ. ಕೆ. ವಿ. ರಾಜೇಂದ್ರ, “ಉತ್ತರ ಕರ್ನಾಟಕ ಭಾಗದ ಪ್ರವಾಸಿ ತಾಣಗಳು ಪ್ರಚಾರದಲ್ಲಿ ಹಿಂದೆ ಬಿದ್ದಿರುವುದು ಕಳವಳಕಾರಿ ಸಂಗತಿ. ಈ ಭಾಗದ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿಯೂ ಗುರುತಿಸುವಂತಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಅಗತ್ಯವಿದ್ದು. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು” ಎಂದು ಹೇಳಿದರು.
ವಿವಿಧ ಪ್ರವಾಸಿ ತಾಣಗಳು: “ಬೆಳಗಾವಿ ಹತ್ತಿರದ ಚನ್ನಮ್ಮನ ಕಿತ್ತೂರು, ನಂದಗಡ, ರಾಜಹಂಸಗಡ ಸೇರಿದಂತೆ ಇನ್ನೂ ಅನೇಕ ಪ್ರವಾಸಿ ತಾಣಗಳ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಬೇಕು. ಈ ಭಾಗದ ಜನರ ಧೈರ್ಯ, ಕಾರ್ಯಕ್ಷಮತೆ, ಹಾಗೂ ನೈಸರ್ಗಿಕ ಸಂಪತ್ತುಗಳ ಕುರಿತು ಜಾಗೃತಿ ಮೂಡಿಸಬೇಕು. ಖಾನಾಪುರ ಭಾಗದ ಅರಣ್ಯ ಪ್ರದೇಶವು ತೀರ್ಥಹಳ್ಳಿಯ ಕಾಡಿಗಿಂತ ದಟ್ಟವಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ಬೆಳಕು ಚೆಲ್ಲುವುದರ ಮೂಲಕ ಹೆಚ್ಚಿನ ಸಂಖ್ಯೆಯ ಚಾರಣಿಗರನ್ನು ಆಕರ್ಷಿಸುವ ಕಾರ್ಯವಾಗಬೇಕಾಗಿದೆ” ಎಂದು ತಿಳಿಸಿದರು.
“ಬೆಂಗಳೂರಿನಿಂದ ಮುಂಬೈಗೆ ಕೈಗಾರಿಕಾ ಉದ್ದೇಶದಿಂದ ಉದ್ಯಮಿಗಳು ಈ ಮಾರ್ಗವಾಗಿಯೇ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಹೋಟೆಲ್ ಉದ್ಯಮಕ್ಕೆ ಅನುಕೂಲವಾಗಿದೆ. ಈ ಭಾಗದ ಕೃಷಿ ಪ್ರವಾಸೋದ್ಯಮದ ಜೊತೆಗೆ ಗ್ರಾಮೀಣ ಭಾಗದಲ್ಲಿ ಅನೇಕ ಉತ್ಪನ್ನಗಳಿಂದಲೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಹುದಾಗಿದೆ. ಈ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಹಾಗೂ ಪ್ರಚಾರ ಮಾಡುವುದು ಅತಿ ಮುಖ್ಯವಾಗಿದೆ” ಎಂದರು.
Laxmi News 24×7