ಚಚಡಿ (ಬೆಳಗಾವಿ ಜಿಲ್ಲೆ): ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಆರಂಭವಾದ ವಾಂತಿ- ಭೇದಿ ಸೋಮವಾರ ಉಲ್ಬಣಗೊಂಡಿದೆ. ಒಂದೇ ದಿನ 41 ಮಂದಿಗೆ ವಾಂತಿ- ಭೇದಿ ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥರಾದ ಮೂವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ, ಮೂವರನ್ನು ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿತ್ರಾಣಗೊಂಡಿರುವ ಈರವ್ವ ಗಾಳಿಮಠ (63) ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ. ಇನ್ನಿಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಉಳಿದವರು ಚಚಡಿ ಹಾಗೂ ಇಂಚಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದು ಗ್ರಾಮಕ್ಕೆ ಧಾವಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿದರು.
‘ಕಲುಷಿತ ನೀರು ಸೇವನೆಯಿಂದ ವಾಂತಿ- ಭೇದಿ ಕಾಣಿಸಿಕೊಂಡಿದೆ. ಪ್ರಾಣಾಪಾಯ ಆಗಿಲ್ಲ. ನಿತ್ರಾಣಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರಿಸಲಾಗಿದೆ. ಗ್ರಾಮದಲ್ಲಿ ನಾಲ್ವರು ವೈದ್ಯರು ಹಾಗೂ ಹಲವು ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲೇ ಇದ್ದಾರೆ. ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಜಾಗೃತಿ ಮೂಡಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಸವದತ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಯಶವಂತಕುಮಾರ್ ಮಾತನಾಡಿ, ‘ಸಮಸ್ಯೆ ಉಲ್ಬಣವಾಗುತ್ತಿದ್ದಂತೆ ಎಚ್ಚರಿಕೆ ಕ್ರಮ ವಹಿಸಲಾಗಿದೆ. ಗ್ರಾಮದ ಬೋರ್‌ವೆಲ್‌ಗಳ ನೀರನ್ನು ತಪಾಸಣೆಗೆ ಕಳಿಸಲಾಗಿದೆ. ಸೋಮವಾರ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗಿದೆ. ಓವರ್‌ಹೆಡ್ ಟ್ಯಾಂಕಿನಿಂದ ನೀರು ಸ್ಥಗಿತ ಮಾಡಲಾಗಿದೆ’ ಎಂದರು.