ಬೆಳಗಾವಿ : ಜಿಲ್ಲೆಯ 18 ಜನ ಶಾಸಕರ ಪೈಕಿ 13 ಜನ ಬಿಜೆಪಿ ಶಾಸಕರಿದ್ದಾರೆ. ಈ ಪೈಕಿ ಇದೀಗ 9 ಜನರಿಗೆ ಸರ್ಕಾರದಲ್ಲಿ ಸಚಿವ, ನಿಗಮ ಸೇರಿ ಮಹತ್ವ ಹುದ್ದೆ ಪಡೆದುಕೊಂಡಿದ್ದಾರೆ. ಈಗ ಮತ್ತೆ ಹಾಲಿ ಹಾಗೂ ಮಾಜಿ ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಗಳು ಒಲಿದು ಬಂದಿದ್ದು, ಬೆಳಗಾವಿ ಜಿಲ್ಲೆ. ಈಗ, ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಡುತ್ತಿದೆ.
ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಎಲಿಲ್ಲದ ಪ್ರಶಸ್ತ್ಯ ದೊರೆಯುತ್ತಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ರಾಯಭಾಗ ಶಾಸಕ ದುರ್ಯೋಧನ ಐಹೊಳೆ, ರಾಜ್ಯ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿಯ ( ಹುಬ್ಬಳ್ಳಿ) ಅಧ್ಯಕ್ಷರನ್ನಾಗಿ ಬೈಲಹೊಂಗಲ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಅವರನ್ನು ನೇಮಕ ಮಾಡಿ, ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಬೈಲಹೊಂಗಲ ಶಾಸಕ ಡಾ.ವಿಶ್ವನಾಥ ಪಾಟೀಲ ಕಳೆದ ವಿಧಾನಸಭೆಯಲ್ಲಿ ಸೋಲು ಅನುಭವಿಸಿದ್ದರು. ಆದರೂ ಸಹ ಪಕ್ಷಕ್ಕಾಗಿ ಶ್ರಮಿಸುತ್ತಿದ್ದರು. ಅವರ ಪಕ್ಷ ನಿಷ್ಠೆಗೆ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿಯ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಇನ್ನೂ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ, ಈ ಹಿಂದೆ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರನ್ನಾಗಿ ಯಡಿಯೂರಪ್ಪ ಆದೇಶ ಮಾಡಿದ್ದರು. ಆದರೆ ಅದನ್ನ ಒಪ್ಪದ ಐಹೊಳೆ ನಿಗಮದಿಂದಲೇ ದೂರ ಉಳಿದಿದ್ದರು. ಈಗ ಐಹೊಳೆ ಬೇಡಿಕೆಯಂತೆ ಇಷ್ಟದ ಖಾತೆಯನ್ನು ಯಡಿಯೂರಪ್ಪ ನೀಡಿ ಐಹೊಳೆ ಬೇಡಿಕೆಗೆ ಅಸ್ತು ಎಂದಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 10ರಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು, 8 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ 3 ಜನ ಶಾಸಕರು ಬಿಜೆಪಿ ಸೇರ್ಪಡೆ ಆಗಿ ಮತ್ತೆ ಗೆಲುವು ಸಾಧಿಸಿ ಇಬ್ಬರು ಸಚಿವರಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಈ ಮೂಲಕ ಗಡಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಕಾಂಗ್ರೆಸ್ 5 ಶಾಸಕರನ್ನು ಹೊಂದಿದೆ.