ಬೆಂಗಳೂರು, ನ.25- ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರ ಸವಾಲು ಸ್ವೀಕರಿಸಿರುವ ಕನ್ನಡಪರ ಸಂಘಟನೆಗಳು ಡಿ.1ರಂದು ವಿಜಯಪುರದ ಜಿಲ್ಲಾಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಘೋಷಣೆ ಮಾಡಿವೆ. ಮರಾಠ ಸಮುದಾಯ ಅಭಿವೃದ್ಧಿ ನಿಗಮ ರಚನೆಯನ್ನು ವಿರೋಧಿಸಿ ಹೋರಾಟಕ್ಕಿಳಿದಿರುವ ಕನ್ನಡಪರ ಸಂಘಟನೆಗಳನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರೋಲ್‍ಕಾಲ್ ಮತ್ತು ನಕಲಿ ಹೋರಾಟಗಾರರು ಎಂದು ಟೀಕಿಸುವ ಜತೆಗೆ ವಿಜಯಪುರದಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸವಾಲು ಹಾಕಿದ್ದರು.
ಇದಕ್ಕೆ ಸಡ್ಡು ಹೊಡೆದಿರುವ ಕನ್ನಡಪರ ಸಂಘಟನೆಗಳು ವಿಜಯಪುರ ಜಿಲ್ಲಾಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ತಿರುಗೇಟು ನೀಡಲು ಮುಂದಾಗಿದೆ. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಹಂತ ಹಂತವಾಗಿ ಹೋರಾಟಗಳನ್ನು ರೂಪಿಸಲಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನುಹಮ್ಮಿಕೊಂಡಿದೆ.