ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆವರೆಗೂ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ.
ನಿನ್ನೆ ಮಧ್ಯರಾತ್ರಿಯವರೆಗೂ ಮಳೆ ಬರುವ ಯಾವುದೇ ವಾತಾವರಣ ಇರಲಿಲ್ಲ.
ಆದರೆ, ನಸುಕಿನ ಜಾವ ಮಳೆರಾಯ ಅಬ್ಬರಿಸಿದ್ದಾನೆ. ನಿದ್ರೆಯಿಂದ ಎಚ್ಚರಗೊಂಡ ಎಷ್ಟೋ ಮಂದಿ ವರುಣ ಅಬ್ಬರ ಕಂಡು ದಂಗಾಗಿದ್ದಾರೆ. ಸುಮಾರು ಮೂರ್ನಾಲ್ಕು ಗಂಟೆ ಮಳೆ ಎಡಬಿಡದೆ ಸುರಿದಿದೆ. ಇದರ ಪರಿಣಾಮ ರಾಜಧಾನಿಯಲ್ಲಿ ಜನ-ಜೀವನ ಅಸ್ತವ್ಯಸ್ತಗೊಂಡಿದೆ.
ನಾಗಾವಾರ ಜಂಕ್ಷನ್ ಮತ್ತು ಹೆಬ್ಬಾಳ ನಡುವಿನ ಹೊರ ವರ್ತುಲ ರಸ್ತೆಯಲ್ಲಿ ಭಾರಿ ನೀರು ನಿಂತಿದ್ದು, ಎರಡೂ ಕಡೆ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಹೆಬ್ಬಾಳ ಫ್ಲೈಓವರ್ನಲ್ಲಿ ಎಸ್ಟೀಮ್ ಮಾಲ್ನಿಂದ ಮೇಖ್ರಿ ವೃತ್ತದ ಕಡೆ ವಾಹನ ಸಂಚಾರ ಮಂದಗತಿಯಲ್ಲಿದೆ. ಮಾರತಹಳ್ಳಿಯ ಹೊರವರ್ತುಲ ರಸ್ತೆ, ಕಾರ್ತಿಕ್ ನಗರ ಮತ್ತು ಕಲ್ಯಾಣ ನಗರ ಜಲಾವೃತಗೊಂಡಿದೆ.