ಸರ್ಕಾರಿ ಕೆಲಸಕ್ಕಾಗಿ ಹಗಲಿರುಳು ತಪಸ್ಸು ಮಾಡುವ ಎಷ್ಟೋ ಮಂದಿ ನಮ್ಮ ನಡುವೆ ಇದಾರೆ. ಅದೇನೆ ಆಗಲಿ ಸರ್ಕಾರಿ ನೌಕರಿ ಪಡೆಯಲೇಬೇಕು ಎಂಬ ದೃಢ ಸಂಕಲ್ಪದೊಂದಿಗೆ ಓದಿನಲ್ಲಿ ಮಗ್ನರಾಗಿರುತ್ತಾರೆ. ಕೆಲವರಂತೂ ಕೋಚಿಂಗ್ ಕ್ಲಾಸ್ಗಳಿಗೆ ಸೇರಿ ಕಠಿಣ ತರಬೇತಿ ನಡೆಸುತ್ತಾರೆ.
ಆದರೆ, ಕೆಲವರು ಯಾವುದೇ ಕೋಚಿಂಗ್ ಪಡೆಯದೇ ಸರ್ಕಾರಿ ಕೆಲಸ ಗಿಟ್ಟಿಸಿದ ಎಷ್ಟೋ ಉದಾಹರಣೆಗಳು ಸಹ ನಮ್ಮ ನಡುವೆ ಇದೆ. ನೀವು ಮೇಲಿನ ಫೋಟೋದಲ್ಲಿ ನೋಡುತ್ತಿರುವ ಯುವತಿ ಈ ಸಾಧನೆಗೆ ತಾಜಾ ಉದಾಹರಣೆಯಾಗಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೇತಾವತ್ ನಿಕಿತಾ ಅವರ ಯಶೋಗಾಥೆ ವೈರಲ್ ಆಗುತ್ತಿದೆ. ತೆಲಂಗಾಣ ರಾಜ್ಯದ ಅದಿಲಾಬಾದ್ ಜಿಲ್ಲೆಯ ಚಿನ್ನಬುಗ್ಗರಂ ಗ್ರಾಮದ ಈ ಯುವತಿ ತನ್ನ ಯಶಸ್ಸಿನಿಂದ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದಾರೆ. ನಿಕಿತಾ ಅವರ ತಂದೆಯ ಹೆಸರು ಸರ್ದಾರ್ ಸಿಂಗ್ ಮತ್ತು ಆಕೆಯ ತಂದೆ ಪ್ರಸ್ತುತ ಎಆರ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸದ್ಯ ಕೇತಾವತ್ ನಿಕಿತಾ ಅವರು ಆರು ಸರ್ಕಾರಿ ಕೆಲಸಗಳನ್ನು ಗಿಟ್ಟಿಸುವ ಮೂಲಕ ಸುದ್ದಿಯಾಗಿದ್ದಾರೆ. ಇದೇನು ಕಡಿಮೆ ಸಾಧನೆಯಲ್ಲ. ಒಂದೇ ಒಂದು ಸರ್ಕಾರಿ ಕೆಲಸ ಗಿಟ್ಟಿಸಲು ನಾನಾ ಕಸರತ್ತು ಮಾಡುವವರ ಮಧ್ಯೆ ಆರು ಸರ್ಕಾರಿ ನೌಕರಿ ಪಡೆಯುವುದು ಅಂದರೆ ದೊಡ್ಡ ಸಾಧನೆಯೇ ಸರಿ. ಕೇತಾವತ್ ನಿಖಿತಾ ಮಂಚಿರ್ಯಾಲದ ಖಾಸಗಿ ಶಾಲೆಯಲ್ಲಿ ಓದಿ ನಂತರ ಮೇದಕ್‌ನ ಮಾಡೆಲ್ ಜೂನಿಯರ್ ಕಾಲೇಜಿನಲ್ಲಿ ಇಂಟರ್ ಮುಗಿಸಿದ್ದಾರೆ. ನಂತರ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಬಿಇಡಿ ಮುಗಿಸಿದರು. ನಂತರ ಅದೇ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ನಲ್ಲಿ ಪಿಜಿ ಮುಗಿಸಿದರು.
2023ರಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ನಿಕಿತಾ ಸರ್ಕಾರಿ ಉದ್ಯೋಗಗಳಿಗೆ ತಯಾರಿ ಆರಂಭಿಸಿದರು ಮತ್ತು ತನ್ನ ಗುರಿಗಳನ್ನು ಸಾಧಿಸಿದ್ದಾರೆ. ನಿಕಿತಾ ಜೂನಿಯರ್ ಲೆಕ್ಚರರ್ ಕೆಲಸಕ್ಕೆ ಆಯ್ಕೆಯಾಗಿದ್ದಾರೆ. ಇದಿಷ್ಟೇ ಅಲ್ಲದೆ, ಗ್ರೂಪ್ 4 ಉದ್ಯೋಗಕ್ಕೂ ಆಯ್ಕೆಯಾಗಿದ್ದಾರೆ. ವಸತಿ ಶಾಲಾ ಶಿಕ್ಷಕಿಯಾಗಿ, ಪಿಜಿಟಿ ಶಿಕ್ಷಕಿಯಾಗಿ ಮತ್ತು ಸಮಾಜ ಕಲ್ಯಾಣ ವಸತಿ ಪದವಿ ಕಾಲೇಜು ಉಪನ್ಯಾಸಕಳಾಗಿ ಆಯ್ಕೆಯಾದರು.
ಕೇವಲ 12 ತಿಂಗಳಲ್ಲಿ ಆರು ಸರ್ಕಾರಿ ಉದ್ಯೋಗಗಳನ್ನು ಗಿಟ್ಟಿಸಿಕೊಂಡು ಅದೆಷ್ಟೋ ಜನರಿಗೆ ನಿಕಿತಾ ಸ್ಪೂರ್ತಿಯಾಗಿದ್ದಾರೆ. ಪ್ರಸ್ತುತ, ಅವರು ಸಮಾಜ ಕಲ್ಯಾಣ ವಸತಿ ಕಾಲೇಜಿನಲ್ಲಿ ಪದವಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.