ಜುಗೂಳ (ಕಾಗವಾಡ ತಾಲ್ಲೂಕು): ‘ಮನ್ಯಾಗೀನ ವಸ್ತುಗಳನ್ನೆಲ್ಲ ಕಟ್ಟಿ ಇಟ್ಟೇವ್ರಿ. ಪ್ರತಿದಿನಾ ನಸುಕಿನ್ಯಾಗ ಹೊಳಿದಂಡಿಗಿ ಬಂದ್ ಎಷ್ಟ ನೀರ ಬಂದೇತಿ ಅಂತ ನೋಡಿಹೋಗ್ತೇವ್ರಿ. ಮಳಿಗಾಲ ಬಂತಂದ್ರ ನಮಗ್ ರಾತ್ರಿ ನಿದ್ದಿ ಇಲ್ಲ. ಮನ್ಯಾಗ ನೆಮ್ಮದಿ ಇಲ್ಲ. ಬ್ಯಾರೆ ಕಡೆ ಸ್ಥಳಾಂತರ ಮಾಡೋದ ನಮ್ಮ ಸಮಸ್ಯೆಕ್ ಪರಿಹಾರ…’
ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಕಾಗವಾಡ ತಾಲ್ಲೂಕಿನ ಜುಗೂಳ-ಮಹಾರಾಷ್ಟ್ರದ ಖಿದ್ರಾಪುರ ಸೇತುವೆ ಬಳಿ ಸೋಮವಾರ ಬಂದುನಿಂತಿದ್ದ ಜುಗೂಳ ಗ್ರಾಮಸ್ಥರಾದ ಪ್ರಕಾಶ ಪಾಟೀಲ ಮತ್ತು ವಿಜಯಕುಮಾರ ಮಿನಚೆ ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡಿದ್ದು ಹೀಗೆ.
‘ಹೊಲಕ್ಕೆಲ್ಲ ನೀರ ಬಂದೇತ್ರಿ. ಈಗ ಊರಾಗೂ ಬರಾತೇತ್ರಿ. ಹಂಗಾಗಿ ಮನ್ಯಾಗ ಇದ್ದ ಎಮಗೋಳ್ನೆಲ್ಲ ಬೀಗರ ಮನೀಗಿ ಕಳಿಸೇವ್ರಿ. ಮಳಿ ಇನ್ನಷ್ಟು ಜೋರಾದ್ರ ನಾವು ಗಂಜಿಕೇಂದ್ರದತ್ತ (ಕಾಳಜಿ ಕೇಂದ್ರದತ್ತ) ಹೋಗ್ತೇವ್ರಿ. ನಮ್ಮ ಕಷ್ಟ ಯಾರ ಕೇಳಾವ್ರಿ’ ಎನ್ನುವಾಗ ಅವರ ಮೊಗದಲ್ಲಿ ಬೇಸರದ ಭಾವ ಕಾಡುತ್ತಿತ್ತು.
ದನಗೋಳ ಉಪವಾಸ ಬೀಳಾತಾವ್ರಿ:
‘ನಮ್ಮ ಮನ್ಯಾಗ ನಾಲ್ಕ ದನಾ ಅದಾವ್ರಿ. ಐದ ಎಕರೆದಾಗ ಬೆಳೆದಿದ್ದ ಬೆಳಿಗೋಳ ನೀರಲ್ಲಿ ಮುಳಗ್ಯಾವು. ದನಕ್ಕ ಬೆಳಿದಿದ್ದ ಮೇವು ನೀರು ಪಾಲಾಗೇತ್ರಿ. ಹಂಗಾಗಿ ಮೇವು ಸಿಗಲ್ದ ದನಗೋಳ ಉಪವಾಸ ಬೀಳಾತಾವ್ರಿ’ ಎಂದು ಮಂಗಾವತಿಯ ಕೃಷಿಕ ಬಾಳಗೌಡ ಪಾಟೀಲ ಹೇಳಿದರು.