ಬಿಜೆಪಿ ವಿರುದ್ದ ಕಾನೂನು ಮತ್ತು ರಾಜಕೀಯ ಹೋರಾಟಕ್ಕೆ ಸಿದ್ದ: ಸಿಎಂ
ಬೆಳಗಾವಿ: ಮುಡಾ ಪ್ರಕರಣದಲ್ಲಿ ಬಿಜೆಪಿ ಮಾಡಿರುವ ಆರೋಪಕ್ಕೆ ಪ್ರತಿಯಾಗಿ ನಾವು ಕಾನೂನು ಮತ್ತು ರಾಜಕೀಯವಾಗಿ ಹೋರಾಟ ಮಾಡಲು ಸಿದ್ದರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು.
ಬೆಳಗಾವಿಯಲ್ಲಿ ಸೋಮವಾರ (ಆ.05) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣ ವಿಷಯದಲ್ಲಿ ತಮ್ಮ ವಿರುದ್ಧದ ಶೋಕಾಸ್ ನೋಟೀಸ್ ವಾಪಸ್ ತೆಗೆದುಕೊಳ್ಳಬೇಕು.
ಅಬ್ರಾಹಂ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ರಾಜ್ಯಪಾಲರು ಈ ವಿಷಯದಲ್ಲಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಆರಂಭಿಸಲಾಗಿದೆ. ಈ ಹಿಂದೆ ಯಡಿಯೂರಪ್ಪ ಸರಕಾರ ಇದ್ದಾಗ ಪೂರ್ಣ ಮನೆ ಬಿದ್ದವರಿಗೆ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಇದರಲ್ಲಿ ಬಹಳ ದುರುಪಯೋಗವಾಯಿತು. ಮೇಲಾಗಿ ಎಷ್ಟೋ ಜನರಿಗೆ ಈ ಪರಿಹಾರ ಹಣ ಸಿಗಲೇ ಇಲ್ಲ. ಮೂರು ಮತ್ತು ನಾಲ್ಕನೇ ಕಂತಿನ ಹಣ ಕೊಡಲೇ ಇಲ್ಲ. ನಾವು ಮನೆ ಹಾನಿಯಾದವರಿಗೆ 1.20 ಲಕ್ಷ ರೂ ಪರಿಹಾರ ಮತ್ತು ಒಂದು ಮನೆ ಕೊಡಲು ತೀರ್ಮಾನ ಮಾಡಿದ್ದೇವೆ ಎಂದರು.