ಪ್ರವಾಹ ಪೀಡಿತ ಸ್ಥಳಗಳಿಗೆ ಸಿಎಂ ಭೇಟಿ; ಸಿಎಂ ಕಾಲಿಗೆ ಬಿದ್ದ ಸಂತ್ರಸ್ತರು
ಬೆಳಗಾವಿ: ನದಿ ನೀರಿನ ಪ್ರವಾಹದಲ್ಲಿ ಸಿಲುಕಿ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು, ನಮ್ಮಸಮಸ್ಯೆ ಬಗೆಹರಿಸುವಂತೆ ಸಂತ್ರಸ್ತ ಮಹಿಳೆಯರು ಬೇಡಿಕೊಂಡ ಘಟನೆ ಸೋಮವಾರ (ಆ 05) ನಡೆದಿದೆ.
ಗೋಕಾಕ ನಗರದಲ್ಲಿರುವ ಕಾಳಜಿ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಭೇಟಿ ನೀಡಿದಾಗ, ಅನೇಕ ಮಹಿಳೆಯರು ಕೈ ಮುಗಿದು ಬೇಡಿಕೊಂಡರು.
ನಮಗೆ ಪರಿಹಾರ ಕೊಡಿ, ಮನೆ ಕಟ್ಟಿಸಿ ಕೊಡುವಂತೆ ಮನವಿ ಮಾಡಿಕೊಂಡರು.
ಅತಿವೃಷ್ಟಿ ಹಾಗೂ ಪ್ರವಾಹದಿಂದ ಬಾಧಿತಗೊಂಡಿರುವ ಗೋಕಾಕ ನಗರದ ವಿವಿಧ ಪ್ರದೇಶಗಳು ಮತ್ತು ಕಾಳಜಿ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು. ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ರಸ್ತೆ ಮಾರ್ಗವಾಗಿ ಗೋಕಾಕ ನಗರಕ್ಕೆ ಆಗಮಿಸಿದರು.
ಮನೆಗಳಿಗೆ ನೀರು ನುಗ್ಗಿದ ತಕ್ಷಣವೇ ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ನಮ್ಮನ್ನು ಸ್ಥಳಾಂತರಿಸಿದ್ದಾರೆ. ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿರುತ್ತಾರೆ ಎಂದು ಸಂತ್ರಸ್ತ ಕುಟುಂಬದವರು ಹೇಳಿದರು. ನಮಗೆ ಪರಿಹಾರ ಒದಗಿಸುವಂತೆ ಕಾಲಿಗೆ ಬಿದ್ದರು.