ಬೆಂಗಳೂರು: ರಾಜ್ಯಪಾಲರ ನೋಟಿಸ್ ಮತ್ತು ಮೈತ್ರಿಪಕ್ಷಗಳ ಪಾದಯಾತ್ರೆ ನಡುವೆಯೂ ಮುಡಾ ಹಗರಣದ ವಿಚಾರದಲ್ಲಿ ಸಂಪೂರ್ಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗಿದ್ದೇವೆ ಎಂಬ ಸಂದೇಶ ವನ್ನು ಕಾಂಗ್ರೆಸ್ ಹೈಕಮಾಂಡ್ ರವಾನಿ ಸಿದೆ. ಜತೆಗೆ ಸಂಪುಟದ ಎಲ್ಲ ಸಚಿವರು ಕೂಡ ಸಿಎಂ ಬೆಂಬಲಕ್ಕೆ ನಿಲ್ಲಬೇಕು.
ಎಲ್ಲರೂ ಸೇರಿ ಕಾನೂನು ಹೋರಾಟಕ್ಕೆ ಸಜ್ಜಾಗಬೇಕು ಎಂದು ಸೂಚನೆ ನೀಡಿದೆ.
ಮುಖ್ಯಮಂತ್ರಿಯವರ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸಹಿತ ಸಂಪುಟದ ಎಲ್ಲ ಸಚಿವರು ಭಾಗವಹಿಸಿದ್ದರು.
ಈ ವೇಳೆ ಮುಡಾ ವಿಷಯದಲ್ಲಿ ಯಾವುದೇ ಹುರುಳಿಲ್ಲ. ಇದರ ಹೊರತಾಗಿಯೂ ವಿಪಕ್ಷಗಳು ಉದ್ದೇಶ ಪೂರ್ವಕವಾಗಿ ಸಿಎಂ ಗುರಿ ಮಾಡಲು ಹೊರ ಟಿವೆ. ಇದರ ವಿರುದ್ಧ ಕಾನೂನು ಹೋರಾಟ ಮಾಡೋಣ. ಎಲ್ಲರೂ ಸಿಎಂ ಬೆನ್ನಿಗೆ ನಿಲ್ಲಬೇಕು ಎಂದು ನಿರ್ದೇಶನ ನೀಡಿದರು ಎನ್ನಲಾಗಿದೆ.
ಸಭೆಯ ಬಳಿಕ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೆ.ಸಿ. ವೇಣುಗೋಪಾಲ್, ಗ್ಯಾರಂಟಿಗಳ ಮೂಲಕ ಉತ್ತಮ ಆಡಳಿತ ನೀಡುತ್ತಿರುವ ಸರಕಾರವನ್ನು ಉರುಳಿಸುವ ಮತ್ತೂಂದು ಪ್ರಯತ್ನವನ್ನು ಬಿಜೆಪಿ-ಜೆಡಿಎಸ್ ಮಾಡುತ್ತಿವೆ. ಆ ಪಕ್ಷಗಳ ಪಿತೂರಿಗೆ ನಾವು ಜಗ್ಗುವುದಿಲ್ಲ. ನಾವು ಜನರ ಬಳಿಗೆ ಹೋಗುತ್ತೇವೆ. ಅವರಿಗೆ ವಾಸ್ತವಾಂಶ ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.