ಬೆಳಗಾವಿ: ಸರಕಾರ ಪ್ರವಾಹ ಸಂತ್ರಸ್ತರ ಜೊತೆಗಿದೆ. ಅವರಿಗೆ ಎಲ್ಲ ರೀತಿಯಲ್ಲೂ ನೆರವು ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳಗಾ (ಯು), ಅತವಾಡ, ಬಸುರ್ತೆ, ಬೆಕ್ಕಿನಕೇರಿ, ಬೆಳಗುಂದಿ, ಸೋನೋಲಿ, ಕೊನೆವಾಡಿ, ರಾಕಸಕೊಪ್ಪ, ಯಳೆಬೈಲ್, ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಮನೆಗಳ ವೀಕ್ಷಣೆ ಮಾಡಿದರು.

ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಅನೇಕ ಕಡೆ ಮನೆ ಬಿದ್ದಿದೆ, ಆಸ್ತಿಪಾಸ್ತಿ ಹಾನಿಯಾಗಿದೆ. ಎಲ್ಲರಿಗೂ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಲಾಗುವುದು. ಖಾನಾಪುರ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದು, ಎರಡೂ ಕ್ಷೇತ್ರ ಸೇರಿ 50ಕ್ಕೂ ಹೆಚ್ಚು ಮನೆಗಳು ಬಿದ್ದಿವೆ ಎಂದರು
Laxmi News 24×7