ಬೆಳಗಾವಿ: ‘ಯಾವ ಧರ್ಮವೂ ಅಂಗಾಂಗ ದಾನ ನಿಷೇಧಿಸಿಲ್ಲ. ಈ ಪದ್ಧತಿ ಅನುಸರಿಸಿದರೆ ಬದುಕಿನಲ್ಲಿ ಮೋಕ್ಷ ಸಿಗದು, ನಿಧನದ ನಂತರ ಸ್ವರ್ಗಕ್ಕೆ ಹೋಗಲಾಗದು ಎಂಬೆಲ್ಲ ತಪ್ಪು ಕಲ್ಪನೆ ಜನರಲ್ಲಿವೆ. ಇದರಿಂದ ಎಲ್ಲರೂ ಹೊರಬಂದು ಅಂಗಾಂಗ ದಾನಕ್ಕೆ ಮುಂದಾಗಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲ್ಲಿನ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆಯಂಡ್ ರಿಸರ್ಚ್‌ನ (ಕಾಹೇರ್) ಡಾ.ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಆಯೋಜಿಸಿದ್ದ ಭಾರತೀಯ ಅಂಗಾಂಗ ದಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಕಸಿ ಮಾಡಲು ಇಂದು ಅಂಗಾಂಗಗಳ ಅಗತ್ಯವಿದೆ. ಅಂಗಾಂಗ ದಾನದ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ, ಕಸಿಗಾಗಿ ಕಾಯುತ್ತಿರುವವರ ಬೇಡಿಕೆಯಂತೆ ಅಂಗಾಂಗ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಂಗಾಂಗ ದಾನ ಪ್ರಕ್ರಿಯೆ ಆಂದೋಲನ ರೂಪದಲ್ಲಿ ನಡೆಯಬೇಕಿದೆ’ ಎಂದರು.