ನವದೆಹಲಿ: ತರಗತಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ತನ್ನ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ 14 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯರಾತ್ರಿ 12.30ರ ಸುಮಾರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದರಿಂದ ಖಾಸಗಿ ಶಾಲೆಯಲ್ಲಿ ಆತಂಕ ಮನೆ ಮಾಡಿತ್ತು.
ಕೂಡಲೇ ಪೊಲೀಸರನ್ನು ಕರೆಸಿ ಬಾಂಬ್ ಮತ್ತು ಶ್ವಾನ ದಳದಿಂದ ತಪಾಸಣೆ ನಡೆಸಲಾಯಿತು. ದಕ್ಷಿಣ ದೆಹಲಿಯ ಇನ್ನೂ ಎರಡು ಖಾಸಗಿ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ಸಂದೇಶ ಕಳುಹಿಸಲಾಗಿತ್ತು. ಸಂದೇಶ ಕಳುಹಿಸಿರುವವರು ಪಾಕಿಸ್ತಾನಿ ಜನರಲ್ ಎಂದು ಕೂಡ ಎಂದು ಹೇಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನನ್ನು ಶನಿವಾರ ಬಂಧಿಸಲಾಗಿದೆ. ಆತ ಸಂಬಂಧಿಕರ ಇಮೇಲ್ ಖಾತೆಯ ಮೂಲಕ ಶಾಲಾ ಆಡಳಿತಕ್ಕೆ ಮೇಲ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.