ದಾವಣಗೆರೆ: ವೀರಶೈವ – ಲಿಂಗಾಯತರು ಹಿಂದುಗಳು ಎನ್ನುವುದು ಚರ್ಚೆ ಮಾಡುವ ವಿಚಾರ. ನಾವು ಎಲ್ಲಿ ಇದ್ದೇವೆ? ನಾವು ಯಾವ ರಾಷ್ಟ್ರದಲ್ಲಿ ಇದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಈ ರಾಷ್ಟ್ರವನ್ನು ಯಾವ ರೀತಿ ಬೆಳೆಸಬೇಕು ಎಂದು ಯೋಚಿಸಬೇಕು ಎಂದು ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಹಿಂದೂ ಎನ್ನುವುದು ಅತ್ಯಂತ ಶ್ರೇಷ್ಠ ವಾದ ಸತ್ಯ ಸನಾತನವಾದದ್ದು ಹಿಂದುತ್ವದ ವೃಕ್ಷದಲ್ಲಿ ಸಾಕಷ್ಟು ರಂಬೆ-ಕೊಂಬೆಗಳಿವೆ. ಅಲ್ಲಿ ಅಲ್ಲಮಪ್ರಭು ಬಸವಾದಿ ಶರಣರು, ಗೌತಮ ಬುದ್ಧ ಸೇರಿದಂತೆ ಹಲವು ಮಹನೀಯರು ಇದ್ದಾರೆ ಎಂದರು.ನಮ್ಮ ಸರ್ಟಿಫಿಕೇಟ್‌ನಲ್ಲಿ ಹಿಂದೂ ಲಿಂಗಾಯತ ಎಂದು ಬರೆಸಿದ್ದರು. ಎಲ್ಲ ಮಹಾನೀಯರು ಒಂದೇ ಹೇಳಿದ್ದು ಹಿಂದೂ ಎಂದು. ಆದರೆ, ಅಚರಣೆಯಲ್ಲಿ ಒಂದು ರೀತಿಯ ಬದಲಾವಣೆ ಬರಬಹುದು ಅಷ್ಟೇ. ನಾವೆಲ್ಲ ಹಿಂದೂಗಳು. ಹಿಂದೂ ಎನ್ನುವುದು ಮಹಾಸಾಗರ. ನಾವುಗಳು ಅದರಲ್ಲಿ ಸೇರುವ ನದಿಗಳಿದ್ದಂತೆ. ಮುಂದೆ ಜನಗಣತಿ ಬರುತ್ತದೆ. ಆಗ ಚರ್ಚೆ ಮಾಡಿ ಏನು ಬರೆಸಬೇಕು ಎಂದು ತೀರ್ಮಾನ ತೆಗೆದುಕೊಳ್ಳುತ್ತೇವೆ. ವೀರಶೈವ ಲಿಂಗಾಯತ ಎಂದು ಬರೆಸಬೇಕೋ, ವೀರಶೈವ ಎಂದು ಬರೆಸಬೇಕೋ ಎಂದು ತೀರ್ಮಾನ ಮಾಡುತ್ತೇವೆ’ ಎಂದರು.