ಕೃಷ್ಣಾ ನದಿಗೆ ಟ್ರ್ಯಾಕ್ಟರ್ ಪಲ್ಟಿ: ಕೊಚ್ಚಿ ಹೋದ 8 ಜನರಲ್ಲಿ ಇಬ್ಬರು ನಾಪತ್ತೆ
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಅಕ್ಕಿವಾಟ್ -ಬಸ್ತವಾಡ್ ರಸ್ತೆಯಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಆಕಸ್ಮಿಕವಾಗಿ ಕೃಷ್ಣಾ ನದಿಯ ಪ್ರವಾಹದಲ್ಲಿ ಪಲ್ಟಿಯಾಗಿ ಇಬ್ಬರು ನಾಪತ್ತೆಯಾಗಿರುವ ಘಟನೆ ಆ.2 ರಂದು(ಶುಕ್ರವಾರ ) ನಡೆದಿದೆ.
ಅಕ್ಕಿವಾಟ್ , ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಸಲುವಾಗಿ ಮೋಟಾರ್ ಸ್ಟಾರ್ಟ್ ಮಾಡಲೆಂದು ಅಕ್ಕಿವಾಟ್ – ಬಸ್ತವಾಡ್ ರಸ್ತೆಯಿಂದ ತೆರಳುತ್ತಿದ್ದ ಟ್ರ್ಯಾಕ್ಟರ್ ನಲ್ಲಿ ಒಟ್ಟು 8 ಮಂದಿ ಇದ್ದರು ಎನ್ನಲಾಗಿದೆ. ಈ ವೇಳೆ ಕೃಷ್ಣಾ ನದಿಯಲ್ಲಿ ಉಂಟಾದ ಮಹಾಪೂರದಿಂದ ನೀರಿನ ಹರಿವಿಗೆ ಎಲ್ಲರೂ ಕೊಚ್ಚಿ ಹೋಗಿದ್ದಾರೆ.
ಈ ಘಟನೆಯ ಬಗ್ಗೆ ತಿಳಿದ ತತ್ ಕ್ಷಣ ತಾಲೂಕು ಆಡಳಿತವು ಯಾಂತ್ರಿಕ ದೋಣಿ ಮೂಲಕ ವಿಪತ್ತು ನಿರ್ವಹಣಾ ಸಿಬಂದಿಯ ಸಹಾಯದಿಂದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು,8 ಮಂದಿಯ ಪೈಕಿ ಆರು ಮಂದಿಯನ್ನು ರಕ್ಷಿಸಿದ್ದಾರೆ .ಇನ್ನಿಬ್ಬರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.