ರಾಮನಗರ : “ಭ್ರಷ್ಟಾಚಾರವೇ ನಿಮ್ಮ, ತಾಯಿ ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು ಬಳಗ, ಭ್ರಷ್ಟಾಚಾರ ಮಾಡಿರುವ ನಿಮ್ಮನ್ನು ಮೆಚ್ಚನಾ ಪರಮಾತ್ಮನು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಹರಿತ ಮಾತುಗಳಿಂದ ಕುಟುಕಿದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿರುದ್ಧ ರಾಮನಗರದಲ್ಲಿ ಶನಿವಾರ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, “ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಅವರ ಭ್ರಷ್ಟಾಚಾರ ವಿಚಾರಗಳನ್ನು ಅನಾವರಣಗೊಳಿಸುವುದರ ಜತೆಗೆ ನಮ್ಮ ಪಕ್ಷ ಸಂಘಟನೆಗೂ ಒಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
ಜನ ನನ್ನ ನಾಯಕತ್ವಕ್ಕೆ 135 ಸೀಟು, ಕುಮಾರಸ್ವಾಮಿ ನಾಯಕತ್ವಕ್ಕೆ 19 ಸೀಟು ಕೊಟ್ಟಿದ್ದಾರೆ:
“ನಾನು ಶುಕ್ರವಾರದಂದು ಬಿಡದಿಯಲ್ಲಿ ಬೇಕಂತಲೇ ಕುಮಾರಸ್ವಾಮಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ನನ್ನನ್ನು ಜೈಲಿಗೆ ಹಾಕಲು ಮಿಲಿಟರಿ ಬಂದು ಕರೆದುಕೊಂಡು ಹೋಗಲಿದೆ ಎಂದು ಕುಮಾರಸ್ವಾಮಿ ಅವರು ಹಿಂದೆ ಹೇಳಿಕೆ ನೀಡಿದ್ದರು. ನಾನು ಕೇಂದ್ರ ಮಂತ್ರಿಯಾಗಿದ್ದು, ನಿಮ್ಮನ್ನು ತಿಹಾರ್ ಜೈಲಿಗೆ ಕಳಿಸುತ್ತೇನೆ ಎಂಬ ಅರ್ಥದಲ್ಲಿ ಆ ಮಾತು ಹೇಳಿದ್ದರು” ಎಂದರು.