ಬೆಳಗಾವಿ: ‘ಜಿಲ್ಲೆಯ ಎಲ್ಲ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ, ಊಟೋಪಹಾರ, ಔಷಧ ಸಾಮಗ್ರಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪ್ರವಾಹದಿಂದ ಜನರು ಮತ್ತು ಜಾನುವಾರುಗಳ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಾಲ್ ಸೂಚಿಸಿದರು.
ಅತಿವೃಷ್ಟಿಯಿಂದ ಉಂಟಾದ ಹಾನಿ, ಪ್ರವಾಹ ನಿರ್ವಹಣೆ ಸಂಬಂಧ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಆಗಸ್ಟ್‌ನಲ್ಲಿ ಮಳೆ ಪ್ರಮಾಣ ಹೆಚ್ಚುವ ಸಾಧ್ಯತೆ ಇದ್ದು, ಎಲ್ಲ ಕಾಳಜಿ ಕೇಂದ್ರಗಳಲ್ಲಿ ಆಹಾರ, ಔಷಧ ಮತ್ತು ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಜಾನುವಾರು ಶಿಬಿರಗಳಲ್ಲಿ ಬೇಡಿಕೆಯಂತೆ ಮೇವಿನ ದಾಸ್ತಾನು ಇರಿಸಿಕೊಳ್ಳಬೇಕು. 2019ರ ಪ್ರವಾಹ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು, ಈ ಬಾರಿ ಯಾವ ಸಮಸ್ಯೆ ತಲೆದೋರದಂತೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.
‘ಜಲಾಶಯಗಳಿಂದ ನೀರು ಬಿಡುವಾಗ ಬ್ಯಾರೇಜ್‌ಗಳ ನಿರ್ವಹಣೆಗಾಗಿ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವ ಕಾರಣ, ಜನರ ಪ್ರಾಣ ರಕ್ಷಣೆಗೆ ಒತ್ತು ನೀಡಬೇಕು’ ಎಂದು ಸೂಚಿಸಿದರು.
‘ವಿಪತ್ತು ನಿರ್ವಹಣೆಗಾಗಿ ತಹಶೀಲ್ದಾರರ ಖಾತೆಯಲ್ಲಿ ಸಾಕಷ್ಟು ಹಣವಿದೆ. ಒಂದುವೇಳೆ ಹಣದ ಕೊರತೆಯಾದರೆ, ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದೂ ತಿಳಿಸಿದರು.