ವಿಜಯಪುರ: ಆಸ್ತಿ ವಿವಾದದ ಕಾರಣಕ್ಕೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಮಹಿಳೆ ಮೇಲೆ ಅಮಾನವೀಯ ರೀತಿಯಲ್ಲಿ ದೌರ್ಜನ್ಯ ನಡೆಸಿದ್ದು, ವೃದ್ಧನ ಮೇಲೆ ಕುಳಿತು ಮನಬಂದಂತೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಜಿಲ್ಲೆಯ ನಾಲತವಾಡ-ನಾರಾಯಣಪುರ ಬಳಿಯ ವೀರೇಶನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ದೇವಮ್ಮ ಲೊಟಗೇರಿ ಹಾಗೂ ಸಣ್ಣಹನುಮಂತ ಲೊಟಗೇರಿ ಎಂಬುವವರ ಮೇಲೆ ಅಮಾನವೀಯ ರೀತಿಯಲ್ಲಿ ಸಂಬಂಧಿಗಳೇ ಹಲ್ಲೆ ಮಾಡಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದೇವಮ್ಮ ಅವರ ತಲೆಗೂದಲು ಹಿಡಿದು ಎಳೆದಾಡಿದ್ದರೆ, ಇನ್ನೋರ್ವ ವ್ಯಕ್ತಿ ವೃದ್ಧ ಸಣ್ಣಹನುಮಂತ ಅವರನ್ನು ಕೆಡವಿ ಎದೆಯ ಮೇಲೆ ಕುಳಿತು ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಹನುಮಂತ ಅವರ ಸಂಬಂಧಿಗಳಾದ ಅಮರಪ್ಪ ಕೋರಿ ಹಾಗೂ ಈರಪ್ಪ ಕೋರಿ ಇವರು ಈ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ.
ಸಣ್ಣಹನುಮಂತ ಹಾಗೂ ಕೋರಿ ಕುಟುಂಬಗಳ ಮಧ್ಯೆ ಆಸ್ತಿ ವಿಷಯವಾಗಿ ವಿವಾದವಿದ್ದು, ಇದೇ ವಿಷಯವಾಗಿ ಉಂಟಾದ ಜಗಳದಲ್ಲಿ ಕೋರಿ ಕುಟುಂಬದವರು ಲೊಟಗೇರಿ ಕುಟುಂಬದ ವೃದ್ಧರ ಮೇಲೆ ಅಮಾನವೀಯ ರೀತಿಯಲ್ಲಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯ ಕಾರಣದಿಂದ ತೀವ್ರವಾಗಿ ಗಾಯಗೊಂಡಿರುವ ದೇವಮ್ಮ, ಹನುಮಂತ ಇವರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದೇಬಿಹಾಳ ನಗರದಲ್ಲಿ ನಡೆದಿರುವ ಈ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.