ನವದೆಹಲಿ: ರಾಮನಗರ ಜಿಲ್ಲೆಗೆ ರಾಮನ ಹೆಸರು ತೆಗೆಯಲು ಆಗಲ್ಲ. ಈ ಭೂಮಿ ಇರುವ ತನಕ ರಾಮನಗರ ಹೆಸರನ್ನು ತೆಗೆಯಲು ಸಾಧ್ಯವಿಲ್ಲ. ಒಂದು ವೇಳೆ ತಮ್ಮ ಸ್ವಾರ್ಥಕ್ಕಾಗಿ ಹೆಸರು ಬದಲಾವಣೆ ಮಾಡಿದರೆ, ಆ ಕೃತ್ಯ ಎಸಗಿದವರು ಸರ್ವನಾಶ ಆಗುತ್ತಾರೆ ಎಂದು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ಶುಕ್ರವಾರ ಸಂಜೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಹೆಸರನ್ನು ತೆಗೆದು ಬೆಂಗಳೂರು ದಕ್ಷಿಣ ಎಂದು ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಕಟುವಾಗಿ ಟೀಕಿಸಿದರು.
ಯಾವುದೇ ಕಾರಣಕ್ಕೂ ರಾಮನಗರದಿಂದ ರಾಮನ ಹೆಸರನ್ನು ಬೇರ್ಪಡಿಸಲು ಆಗಲ್ಲ. ಈ ಭೂಮಿ ಇರುವ ತನಕ ರಾಮನಗರ ಹೆಸರು ತೆಗೆಯಲು ಸಾಧ್ಯ ಆಗುವುದಿಲ್ಲ. ಜಿಲ್ಲೆ ರಚನೆ ಮಾಡಿ ರಾಮನಗರ ಎಂದು ಹೆಸರಿಡುವಾಗ, ವಿಧಾನಸಭೆ ಕ್ಷೇತ್ರಕ್ಕೆ ರಾಮನಗರ ಎಂದು ಹೆಸರು ಇಡುವಾಗ ಯಾವುದೇ ಮಾತು ಆಡಲೇ ಇಲ್ಲ. ತಕರಾರು ಮಾಡಲಿಲ್ಲ. ಈಗ ಸ್ವಾರ್ಥಕ್ಕಾಗಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದರು.