ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಮಂಡಿಸಿದ ಬಜೆಟ್
ಹೊಸದಿಲ್ಲಿ: ಈ ಬಾರಿಯ ಕೇಂದ್ರ ಬಜೆಟ್ “ಕಾಪಿಕ್ಯಾಟ್’ ಬಜೆಟ್ ಆಗಿದ್ದು, ಇದು ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಮೋದಿ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಈ ಬಜೆಟ್ ಮಂಡನೆಯಾಗಿದೆ ಎಂದಿದ್ದಾರೆ.
ಈ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆ ದು ಕೊಂಡಿ ರುವ ಖರ್ಗೆ, “ಮೋದಿ ಸರ್ಕಾರದ “ಕಾಪಿಕ್ಯಾಟ್ ಬಜೆಟ್’ಗೆ ಸರಿಯಾಗಿ ಕಾಂಗ್ರೆಸ್‌ನ ನ್ಯಾಯಪತ್ರವನ್ನು ನಕಲು ಮಾಡಲೂ ಬಂದಿಲ್ಲ. ತಮ್ಮ ಮಿತ್ರ ಪಕ್ಷಗಳಿಗಾಗಿ ಅರೆ ಮನಸ್ಸಿನಲ್ಲಿ ಉಚಿತ ಕೊಡುಗೆಗಳನ್ನು ನೀಡಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ದೇಶದ ಪ್ರಗತಿಗಾಗಿ ಮಂಡನೆಯಾದ ಬಜೆಟ್ ಅಲ್ಲ. ಇದು “ಸೇವ್ ಮೋದಿ ಗೌರ್ನಮೆಂಟ್ ಬಜೆಟ್’ ಎಂದು ಹೇಳಿದ್ದಾರೆ.
ಹತ್ತು ವರ್ಷಗಳಿಂದ ಉದ್ಯೋಗ ಸೃಷ್ಟಿಯ ಘೋಷಣೆಯನ್ನು ಮಾತ್ರ ಹೇಳಿ ಯುವಕರನ್ನು ಹತಾಶಗೊಳಿಸಿದ್ದು, ಈ ಬಾರಿಯೂ ಕನಿಷ್ಠ ಘೋಷಣೆ ಮಾಡಲಾಗಿದೆ. ರೈತವರ್ಗ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗ ಸೇರಿದಂತೆ ಸಾಮಾಜಿಕವಾಗಿ ಶೋಷಿತ ವರ್ಗಗಳಿಗಾಗಿ ಯಾವುದೇ ಕ್ರಾಂತಿಕಾರಿ ಯೋಜನೆಯನ್ನು ಘೋಷಿಸಿಲ್ಲ ಎಂದು ಖರ್ಗೆ ಟೀಕಿಸಿದ್ದಾರೆ.