ಬೆಂಗಳೂರು: ಪಶ್ಚಿಮಘಟ್ಟ ವ್ಯಾಪ್ತಿಯ 250 ಗ್ರಾಮ ಪಂಚಾಯತ್‌ಗಳ 1,351 ಗ್ರಾಮಗಳ ಸೂಕ್ಷ್ಮ ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆಯಿದೆ ಎಂದು ಕೇಂದ್ರದ ಭೂ ಸರ್ವೆಕ್ಷಣ ಇಲಾಖೆ ವರದಿ ನೀಡಿದ್ದು, ಮುಂಜಾಗ್ರತ ಕ್ರಮವಾಗಿ ಕುಸಿತ ಉಂಟಾಗುವ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ಅಗತ್ಯ ಪರಿಹಾರ ಕಾರ್ಯಾಚರಣೆಗಾಗಿ 100 ಕೋಟಿ ರೂ.
ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಪಶ್ಚಿಮಘಟ್ಟ, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಭೂ ಕುಸಿತಕ್ಕೆ ಕಾರಣವೇನು ? ಹಾಗೂ ಕೈಗೊಳ್ಳಬೇಕಾದ ಸುರಕ್ಷಾ ಕ್ರಮ, ರಸ್ತೆ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ನಿಗದಿ ಮಾಡಬೇಕೆಂದು ಸಿ.ಟಿ. ರವಿ, ಭಾರತಿ ಶೆಟ್ಟಿ, ಪ್ರತಾಪ್‌ಸಿಂಹ ನಾಯಕ್, ಭೋಜೇಗೌಡ ಮುಂತಾದವರು ಸರಕಾರದ ಗಮನ ಸೆಳೆದರು.
ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವರು, 2018ರಿಂದ ರಾಜ್ಯದಲ್ಲಿ ಭೂಕುಸಿತವಾಗುತ್ತಿದೆ. ಇದಕ್ಕೆ ಏನು ಕಾರಣ ಎಂಬುದರ ಬಗ್ಗೆ ಭೂ ವೈಜ್ಞಾನಿಕ ಸರ್ವೇಕ್ಷಣ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಧ್ಯಯನ ನಡೆಸಿವೆ. ಮಳೆಗಾಲದಲ್ಲಿ ವಾಡಿಕೆಯಂತೆ 60 ದಿನಗಳು ಮಳೆಯಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಎರಡು ತಿಂಗಳಲ್ಲಿ ಬೀಳುವ ಮಳೆ ಒಂದೇ ತಿಂಗಳಲ್ಲಿ ಬೀಳುತ್ತಿದೆ ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.