ಬೆಂಗಳೂರು,ಜು.20- ಕಳೆದ 15 ದಿನಗಳಿಂದ ರಾಜ್ಯದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ಹುಬ್ಬಳ್ಳಿ, ಬೆಳಗಾವಿ, ಹಾಸನ, ಶಿವಮೊಗ್ಗ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮನೆಗಳು ಕುಸಿದುಬಿದ್ದು ಅಪಾರ ನಷ್ಟ ಉಂಟಾಗಿದೆ. ಬೆಳಗಾವಿಯಲ್ಲಿ ಮಳೆಯಿಂದಾಗಿ ಅನಾಹುತಗಳು ಹೆಚ್ಚಾಗಿವೆ.
ಎರಡು ಗ್ರಾಮಗಳಲ್ಲಿ ಮನೆ ಕುಸಿದು ಕುಟುಂಬಸ್ಥರು ಬೀದಿ ಪಾಲಾಗಿದ್ದಾರೆ.
ಅದರಲ್ಲೂ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೊಸಟ್ಟಿಯಲ್ಲಿ ಮನೆ ಕುಸಿಯುವ ಮುನ್ನ 2 ಇಟ್ಟಿಗೆಗಳು ಬಿದ್ದಿದ್ದು ಎಚ್ಚೆತ್ತ ಕುಟುಂಬಸ್ಥರು ಓಡಿ ಆಚೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಅದೃಷ್ಟವಶಾತ್ ಎರಡು ಇಟ್ಟಿಗೆಗಳಿಂದಾಗಿ ಇಡೀ ಕುಟುಂಬ ಸಾವಿನ ದವಡೆಯಿಂದ ಪಾರಾಗಿದೆ.
ಪರಿಹಾರದ ನಿರೀಕ್ಷೆ: ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಅನಾಹುತಗಳು ಹೆಚ್ಚಾಗ್ತಿವೆ. ಸದ್ಯ ಬಿದ್ದ ಮನೆಯಲ್ಲಿಯೇ ನಿಂಗಪ್ಪ ಕಮತಗಿ ಕುಟುಂಬ ಬೇರೆ ದಾರಿ ಇಲ್ಲದೆ ವಾಸಿಸುವಂತಾಗಿದೆ. ಮನೆಯ ಒಂದು ಗೋಡೆ ಉರುಳಿ ಬಿದ್ದು ಅವಾಂತರವಾಗಿದೆ. ಮನೆಯ 11 ಜನ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಕಮತಗಿ ಕುಟುಂಬ ಸರ್ಕಾರದಿಂದ ಸಿಗುವ ಪರಿಹಾರದ ನಿರೀಕ್ಷೆಯಲ್ಲಿದೆ.