ಚಿಕ್ಕೋಡಿ: ತಾಲ್ಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ಭಾಷೆಯ ಫಲಕಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕೋಡಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ತಾಲ್ಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳ ಮೇಲೆ ಅನ್ಯ ಭಾಷೆಯ ನಾಮ ಫಲಕಗಳೇ ರಾರಾಜಿಸುತ್ತಿದ್ದು, ಶೇ 60ರಷ್ಟು ಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿದರೂ ಅಂಗಡಿಗಳ ಮಾಲೀಕರು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳ ಮುಂದಿರುವ ಫಲಕಗಳಲ್ಲಿ ಕನ್ನಡ ಭಾಷೆ ಬರೆಯಿಸದೇ ಸರ್ಕಾರದ ಆದೇಶವನ್ನು ಕಡೆಗಣಿಸುತ್ತಿವೆ ಎಂದು ಕರವೇ ತಾಲ್ಲೂಕು ಅಧ್ಯಕ್ಷ ನಾಗೇಶ ಮಾಳಿ ಒತ್ತಾಯಿಸಿ ಮನವಿ ಸಲ್ಲಿಸಿದರು.
ಉಪ ವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಪರಿಮಳಾ ದೇಶಪಾಂಡೆ ಕರವೇ ಸಂಘಟಕರಿಂದ ಮನವಿ ಸ್ವೀಕರಿಸಿದರು. ಹಿರಿಯ ಸಾಹಿತಿ ಎಸ್ ವೈ ಹಂಜಿ, ಸಂಜು ಬಡಿಗೇರ, ನಾಗೇಶ ಕಾಡಾಪೂರೆ, ಸುನೀಲ ತೇರದಾಳೆ, ರಾಮಚಂದ್ರ ಹಂಡೆ, ವಿಶಾಲ ಕುಡಚೆ ಇದ್ದರು.