ಹಾವೇರಿ: ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಹಾಗೂ ಮಹಿಳೆ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಜು.19ರ ಶುಕ್ರವಾರ ಬೆಳಗಿನ ಜಾವ ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.
ನಸುಕಿನ ಜಾವ 4 ಗಂಟೆಯ ಸುಮಾರು ಗ್ರಾಮದ ಹರಕುಣಿ ಕುಟುಂಬಸ್ಥರ ಮನೆ ಮೇಲ್ಬಾವಣಿ ಕುಸಿದಿದೆ. ನಿದ್ರಿಸುತ್ತಿದ್ದ 18 ತಿಂಗಳ ಅವಳಿ ಮಕ್ಕಳಾದ ಅಮೂಲ್ಯ ಹಾಗೂ ಅನುಶ್ರೀ ಮತ್ತು ಮಕ್ಕಳ ಅತ್ತೆ ಚನ್ನಮ್ಮ (30) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮನೆ ಮಾಲೀಕ ಮುತ್ತು ದೊಡ್ಡಬಸಪ್ಪ ಹರಕುಣಿ (35), ಪತ್ನಿ ಸುನೀತಾ ಮುತ್ತು ಹರಕುಣಿ (25) ತಾಯಿ ಯಲ್ಲಮ್ಮ ದೊಡ್ಡಬಸಪ್ಪ ಹರಕುಣಿ (56) ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಘಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಮಹಮ್ಮದ ಖಿಜರ್, ತಹಸೀಲ್ದಾರ್ ಭರತರಾಜ್ ಕೆ.ಎನ್. ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲಿಸುತ್ತಿದೆ.