ಬಾಗಲಕೋಟೆ: ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕುರ್ಚಿ ಕಿತ್ತಾಟದ ವಿಚಾರಕ್ಕೆ ಇಂದು ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಸಂಸದ ಗೋವಿಂದ ಕಾರಜೋಳ, ಸಿಎಂ ಸಿದ್ದರಾಮಯ್ಯ ಆಡಳಿತ ಕುರಿತು ವ್ಯಂಗ್ಯವಾಡಿದರು.
‘ರಾಜ್ಯದಲ್ಲಿ ಸರ್ಕಾರವಾಗಿ ಉಳಿದಿಲ್ಲ, ಮೂರು ಭಾಗಗಳಾಗಿದೆ. ಒಂದು ಸಿದ್ದರಾಮಯ್ಯನವರದ್ದು, ಎರಡನೆಯದು ಡಿ.ಕೆ. ಶಿವಕುಮಾರ್ ಗುಂಪು ಮತ್ತೊಂದು ವೀರಶೈವ ಲಿಂಗಾಯತರದೊಂದು ಗುಂಪು. ನಮಗೆ ಸಿದ್ದರಾಮಯ್ಯ ಸ್ಥಾನಗಳನ್ನು ಬಿಟ್ಟು ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ. ಅನೇಕ ಒತ್ತಾಯಗಳನ್ನು ಮಾಧ್ಯಮಗಳ ಮೂಲಕ ನಾನು ಕೂಡ ನೋಡಿದ್ದೇನೆ’ ಎಂದಿದ್ದಾರೆ.
‘ಸಿದ್ದರಾಮಯ್ಯನವರು ಆಡಳಿತದ ಮೇಲೆ ಹಿಡಿತವನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್ನ ಶಾಸಕರು ಮತ್ತು ಮುಖಂಡರನ್ನು ಹದ್ದುಬಸ್ತಿನಲ್ಲಿ ಇಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೈಕಮಾಂಡ್ಗೂ ಪಕ್ಷದ ಶಾಸಕರು ಹಾಗೂ ಮುಖಂಡರನ್ನು ಶಿಸ್ತಿನಲ್ಲಿಡಲು ಆಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಇದು ಆಡಳಿತಕ್ಕೆ ಒಳ್ಳೆಯ ಲಕ್ಷಣವಲ್ಲ. ಸಿದ್ದರಾಮಯ್ಯನವರಿಗೆ ನನ್ನ ಸಲಹೆ ಏನೂ ಅಂದರೆ ಒಂದು ಶಾಸಕಾಂಗ ಪಕ್ಷದ ಸಭೆ ಕರೆದು ಯಾರಿಗೆ ಬಹುಮತ ಬರುತ್ತದೆ ಎಂಬುದನ್ನು ನೋಡಿ, ಅವರಿಗೆ ಸ್ಥಾನ ಬಿಟ್ಟು ಕೊಡುವುದು ಸೂಕ್ತ’ ಎಂದರು.