ಮಹದಾಯಿ ಜಲಾನಯನ ಪ್ರದೇಶ: ‘ಪ್ರವಾಹ’ ತಂಡದ ಭೇಟಿ

Spread the love

ಖಾನಾಪುರ (ಬೆಳಗಾವಿ ಜಿಲ್ಲೆ): ಮಹದಾಯಿ ನದಿ ನೀರಿನ ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ರಚಿಸಿದ ‘ಪ್ರವಾಹ’ (Progressive River Authority For Water and Harmony) ತಂಡವು ಮಹದಾಯಿ ಜಲಾನಯನ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಮಾಹಿತಿ ಕಲೆಹಾಕಿತು.

ಮುಖ್ಯಸ್ಥ ಪಿ.ಎಂ.ಸ್ಕ್ವಾಟ್‌, ಸದಸ್ಯರಾದ ವೀರೇಂದ್ರ ಶರ್ಮಾ, ಮನೋಜ್‌ ತಿವಾರಿ, ನೀರಜ್‌ ಮಂಗಲಿಕ, ಗೌರವ ಗು‍ಪ್ತಾ, ಸುಭಾಷಚಂದ್ರ, ಮಿಲಿಂದ್‌ ನಾಯ್ಕ, ಪ್ರಮೋದ ಬಾದಾಮಿ, ಅಶೋಕಕುಮಾರ್‌ ವಿ. ಅವರನ್ನು ಒಳಗೊಂಡ 9 ಜನರ ತಂಡ ಬೆಳಿಗ್ಗೆ ಗೋವಾದ ಪಣಜಿಯಿಂದ ಹೊರಟಿತು.

ಮಹದಾಯಿ ಜಲಾನಯನ ಪ್ರದೇಶ: 'ಪ್ರವಾಹ' ತಂಡದ ಭೇಟಿ

ರಸ್ತೆ ಮಾರ್ಗವಾಗಿ ಬಂದ ಸದಸ್ಯರನ್ನು ಕರ್ನಾಟಕ-ಗೋವಾ ಗಡಿಯ ಚೋರ್ಲಾ ಬಳಿ ರಾಜ್ಯದ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಪೊಲೀಸರು ಸ್ವಾಗತಿಸಿದರು. ಅಲ್ಲಿಂದ ಕಣಕುಂಬಿ ಅರಣ್ಯದ ಹಳತಾರಾ ನಾಲೆ, ಸುರ್ಲಾ ನಾಲೆ, ಕಳಸಾ ನಾಲೆಗೆ ತಂಡ ಭೇಟಿ ನೀಡಿ ಪರಿಶೀಲಿಸಿತು. ನಂತರ ಕಣಕುಂಬಿ ಪ್ರವಾಸಿ ಮಂದಿರಕ್ಕೆ ತೆರಳಿ ಸಭೆ ನಡೆಸಿತು.

ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು, ಯೋಜನೆ ಅನುಷ್ಠಾನದ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. ಯೋಜನೆ ನಕ್ಷೆಯೊಂದಿಗೆ ವಿವರಿಸಿದ ಅವರು, ‘ಗೋವಾ ಆರೋ‍ಪಿಸುತ್ತಿರುವ ಪ್ರಕಾರ, ಯೋಜನೆ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ’ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಬಂಡೂರಿ ನಾಲೆ ಪ್ರದೇಶ, ನೇರಸೆ ಗ್ರಾಮಕ್ಕೆ ತಂಡದವರು ಭೇಟಿ ನೀಡಿ, ಬೆಳಗಾವಿ ತಲುಪಿದರು.

ಕಾಡಿದ ಜಿಗಣಿಗಳು:

ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲೇ ಕೈಯಲ್ಲಿ ಛತ್ರಿ ಹಿಡಿದು, ರೇನ್‌ಕೋಟ್‌ ಹಾಕಿಕೊಂಡು ಓಡಾಡಿದ ತಂಡದ ಸದಸ್ಯರನ್ನು ಜಿಗಣಿಗಳು ಬಿಟ್ಟುಬಿಡದಂತೆ ಕಾಡಿದವು. ಸೋಮವಾರ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿರುವ ಅವರು, ಅಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ತಮ್ಮ ‘ಎಕ್ಸ್‌’ ಖಾತೆಯಲ್ಲಿ, ‘ಪ್ರವಾಹ ತಂಡದ ಸದಸ್ಯರು ಕಳಸಾ-ಬಂಡೂರಿ ತಿರುವು ಯೋಜನೆ ಪ್ರದೇಶ ಪರಿಶೀಲಿಸಲಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಸತ್ಯಾಸತ್ಯತೆ ಗೊತ್ತಾಗಲಿದೆ. ಈ ಪರಿಶೀಲನೆ ಗೋವಾದ ಪಾಲಿಗೆ ನಿರ್ಣಾಯಕ. ಗೋವಾ ಸರ್ಕಾರದ ನಿರಂತರ ಪ್ರಯತ್ನದ ಫಲವಿದು’ ಎಂದು ಬರೆದುಕೊಂಡಿದ್ದರು.

‘ಪ್ರವಾಹ ತಂಡದ ಸದಸ್ಯರು ತಮ್ಮ ಭೇಟಿಯ ಉದ್ದೇಶದ ಬಗ್ಗೆ ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆ ನೀಡದೆ ನುಣುಚಿಕೊಂಡಿದ್ದು ಸರಿಯಲ್ಲ. ಇದರಿಂದಾಗಿ ಅವರ ಭೇಟಿಯೂ ಗೊಂದಲದ ಗೂಡಾಗಿಯೇ ಉಳಿದಿದೆ’ ಎಂದು ಮಹದಾಯಿ ಹೋರಾಟಗಾರು ಆಕ್ಷೇಪಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ