ಸಿ.ಎಂ ಬದಲಾವಣೆ ವಿಚಾರ ಹಾದಿ ಬೀದಿ ಮಾತಾಗಬಾರದು: ಎಚ್.ಎಂ.ರೇವಣ್ಣ
ಮಾಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಈ ಸಮಯದಲ್ಲಿ ಸಿ.ಎಂ ಬದಲಾವಣೆ ಮಾತು ಅಪ್ರಸ್ತುತ ಎಂದು ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅದ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಂ ಬದಲಾವಣೆ ವಿಚಾರ ನಾಲ್ಕಾರು ಮಠದ ಶ್ರೀಗಳ ಮಾತಾಗಿದೆಯಷ್ಟೆ. ಇದು ಹಾದಿ ಬೀದಿ ಮಾತಾಗಬಾರದು. ಪಕ್ಷದಲ್ಲಿ ಏನೂ ಬದಲಾವಣೆ ಇಲ್ಲದಿದ್ದರೂ ಬಿಜೆಪಿ ನಾಯಕರು ಈಗಾಗಲೇ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅವರಿಗೆ ನಮ್ಮ ಪಕ್ಷದ ನಾಯಕರು ಮತ್ತು ಮುಖಂಡರು ಆಹಾರವಾಗಬಾರದು ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ನೀಡಲಾಗುತ್ತಿರುವ ಹಣ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಳೆದ ಒಂದು ತಿಂಗಳಿಂದ ಗೃಹಲಕ್ಷ್ಮಿ ಯೋಜನೆ ಹಣ ಜಮೆ ಮಾಡಲು ವಿಳಂಬವಾಗಿದೆ. ಶೀಘ್ರದಲ್ಲಿಯೇ ಎಲ್ಲಾರ ಖಾತೆ ಹಣ ಜಮೆ ಆಗಲಿದೆ ಎಂದು ಭರವಸೆ ನೀಡಿದರು.
ನೀರಿನ ವಿಚಾರವಾಗಿ ರಾಜಕೀಯ ಬೇಡ. ನಾವೆಲ್ಲರೂ ಕರ್ನಾಟಕದವರೇ, ಹೇಮಾವತಿ ನೀರನ್ನು ಬೇರೆ ರಾಜ್ಯಕ್ಕೆ ಕೊಡುತ್ತಿಲ್ಲ. ಎಕ್ಸ್‌ಪ್ರೆಸ್ ಕ್ಯಾನಲ್ ಕಾಮಗಾರಿ ಮುಂದುವರೆದಿದೆ. ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ. ಪೂರ್ಣ ಪ್ರಮಾಣದ ನೀರು ತೆಗೆದುಕೊಂಡು ಬರುತ್ತಿಲ್ಲ. ಹೆಚ್ಚುವರಿ ನೀರನ್ನು ಮಾತ್ರ ನಾವು ಎಕ್ಸಪ್ರೆಸ್ ಕೆನಾಲ್ ಮೂಲಕ ಮಾಗಡಿಯ ಕೆರೆಕಟ್ಟೆಗೆ ಹರಿಸಲಾಗುತ್ತಿದೆ ಎಂದು ತಿಳಿಸಿದರು.