ವಿಜಯಪುರ: ಕಳೆದ ವರ್ಷ ಬಾಯ್ಲರ್ ಸ್ಪೋಟಗೊಂಡು ಕಾರ್ಮಿಕನ ಜೀವ ಪಡೆದ ದುರಂತ ಘಟನೆ ಮಾಸುವ ಮುನ್ನವೇ ಜಿಲ್ಲೆಯ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬಾಯ್ಲರ್ ಸ್ಫೋಟಗೊಂಡಿದೆ. ಸುದೈವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ನಸುಕಿನಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ.
ಸ್ಫೋಟ ಸಂಭವಿಸುವ ಕೆಲವೇ ಸಮಯಕ್ಕೆ ಮುನ್ನ ಕರ್ತವ್ಯದಲ್ಲಿದ್ದ ಸುಮಾರು 15 ಕಾರ್ಮಿಕರು ಚಹಾ ಕುಡಿಯಲೆಂದು ಹೊರ ಹೋಗಿದ್ದರು. ಪರಿಣಾಮ ಘಟನೆಯಲ್ಲಿ ಯಾವುದೇ ಜೀವಹಾನಿ ಆಗಿಲ್ಲ.
2023 ಮಾರ್ಚ್ 4 ರಂದು ಇದೇ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಓರ್ವ ಕಾರ್ಮಿಕ ಮೃತಪಟ್ಟು, ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಈ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ಬಾಯ್ಲರ್ ಸ್ಫೋಟಗೊಂಡಿರುವುದು ಕಾರ್ಮಿಕರು ಹಾಗೂ ರೈತರನ್ನು ಆತಂಕಕ್ಕೆ ದೂಡಿದೆ.
ಕೆಲವೇ ತಿಂಗಳಲ್ಲಿ ಮುಂದಿನ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ಕಾಗಿ ಯಂತ್ರೋಪಕರಣ ಪೂರ್ವ ಸಿದ್ಧತೆ ಕಾರ್ಯ ನಡೆದಿವೆ.
ಮೇಲಿಂದ ಮೇಲೆ ಬಾಯ್ಲರ್ ಸ್ಫೋಟಗೊಳ್ಳಲು ಕಳಪೆ ಗುಣಮಟ್ಟದ ಕಾಮಗಾರಿ ಪ್ರಮುಖ ಕಾರಣವೆಂದು ರೈತರು ದೂರುತ್ತಿದ್ದಾರೆ. ಅಲ್ಲದೇ ನುರಿತ ಕಂಪನಿಗಳು 55 ಕೋಟಿ ರೂ.ಗೆ ಕಾಮಗಾರಿ ಮಾಡಲು ಮುಂದೆ ಬಂದರೂ ಹಣ ಉಳಿಸುವ ನೆಪದಲ್ಲಿ ಅನನುಭವಿ ಕಂಪನಿಗೆ 50 ಕೋಟಿ ರೂ.ಗೆ ಬಾಯ್ಲರ್ ನಿರ್ಮಾಣದ ಯೋಜನೆಯ ಜವಾಬ್ದಾರಿ ನೀಡಿದ್ದೆ ಸರಣಿ ದುರ್ಘಟನೆಗಳಿಗೆ ಕಾರಣವೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Laxmi News 24×7