ರಾಯಚೂರು: ‘ಜಿಲ್ಲೆಯಲ್ಲಿ ವಿವಿಧ ವೃಂದ ಹೊರ ಗುತ್ತಿಗೆ ನೌಕರರಿಗೆ ಬಾಕಿ ಉಳಿದಿರುವ ಏಳು ತಿಂಗಳ ವೇತನವನ್ನು ತಕ್ಷಣ ವೇತನ ಪಾವತಿ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರ ಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ.
ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಕ್ಷಯಗೌಡ, ‘ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಹೇಳುತ್ತಿದ್ದಾರೆ.
ಗುತ್ತಿಗೆ ಏಜೆನ್ಸಿಗಳು ತಮ್ಮ ಹೊಣೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡದ ಹೊರತು ಸಂಬಳ ಕೊಡಲು ಸಾಧ್ಯವಿಲ್ಲವೆಂದು ಹೇಳುತ್ತಿವೆ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರ ಇಎಸ್‌ಐ ಹಾಗೂ ಪಿಎಫ್ ಹಣ ಸಹ ಪಾವತಿಸಿಲ್ಲ. ಆರೋಗ್ಯ ಇಲಾಖೆಯಲ್ಲಿ ಅನೇಕ ವರ್ಷಗಳಿಂದ 9 ಸಾವಿರ ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಖಾಸಗಿ ಸಂಸ್ಥೆಗೆ ಟೆಂಡರ್ ನೀಡಿ ನೌಕರರ ಶೋಷಣೆ ಮಾಡುತ್ತಿದೆ. ರಾಜ್ಯದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡದೇ ಗುತ್ತಿಗೆ ಪದ್ಧತಿಯನ್ನು ಮುಂದುವರಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.