ಬೆಳಗಾವಿ: ‘ರಾಜ್ಯದಲ್ಲಿ ಈ ವರ್ಷ ಏಳು ಜಿಲ್ಲೆಗಳಲ್ಲಿ ಹೊಸದಾಗಿ ಕೃಷಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಕೃಷಿ ಮತ್ತು ಜಲಾನಯನ ಇಲಾಖೆಗಳ ವಿಭಾಗಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
‘ಕೃಷಿಕರಿಗೆ ಹೊಸ ತಾಂತ್ರಿಕತೆ ಕುರಿತು ತರಬೇತಿ ನೀಡಿ, ಅವರ ಸಾಮರ್ಥ್ಯ ವೃದ್ಧಿಸಲು ಕ್ರಮ ವಹಿಸಲಾಗುತ್ತಿದೆ. ಹಾಗಾಗಿ ವಿಜಯನಗರ, ಯಾದಗಿರಿ, ಗದಗ, ಕೋಲಾರ, ಚಾಮರಾಜನಗರ, ರಾಮನಗರ, ಉಡುಪಿ ಜಿಲ್ಲೆಗಳಲ್ಲಿ ಕೃಷಿ ತರಬೇತಿ ಕೇಂದ್ರ ತೆರೆಯಲಾಗುವುದು’ ಎಂದರು.
‘ಕೃಷಿ ಇಲಾಖೆಯಲ್ಲಿ ತರಬೇತಿ ಹಾಗೂ ಗುಣಮಟ್ಟ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ರಯೋಗಾಲಯಗಳನ್ನು ಎನ್‌ಎಬಿಎಲ್ ಮಾನ್ಯತೆಗೆ ಒಳಪಡಿಸಲಾಗುವುದು. ಬೈಲಹೊಂಗಲದ ಪರತಂತ್ರ ಜೀವಿ ಉತ್ಪಾದನೆ ಪ್ರಯೋಗಾಲಯ ಉನ್ನತೀಕರಿಸಲು ಕ್ರಮ ವಹಿಸಲಾಗುವುದು’ ಎಂದರು.
‘ಕಬ್ಬಿನಲ್ಲಿ ಕೀಟಗಳ ನಿಯಂತ್ರಣಕ್ಕೆ ಅಗತ್ಯವಿರುವ ಟ್ರೈಕೋಗ್ರಾಮಾ ಪರತಂತ್ರ ಜೀವಿ ಉತ್ಪಾದನೆಗೆ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು’ ಎಂದು ಸೂಚಿಸಿದ ಅವರು, ‘ಮುಂದಿನ 6 ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರತಂತ್ರ ಜೀವಿ ಉತ್ಪಾದಿಸಿ, ರೈತರಿಗೆ ಒದಗಿಸಬೇಕು’ ಎಂದು ನಿರ್ದೇಶನ ನೀಡಿದರು.