ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆ ಕಂಡಿದೆ.
10 ಗ್ರಾಂ ಚಿನ್ನದ ದರವು ₹800 ಏರಿಕೆಯಾಗಿ, ₹73,350ಕ್ಕೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1,400 ಹೆಚ್ಚಳವಾಗಿ, ₹93,700ಕ್ಕೆ ಮುಟ್ಟಿದೆ.
‘ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರವು ಅಂದಾಜಿಗೂ ಮೀರಿ ಇಳಿಕೆಯಾಗಿದೆ.
ಹಾಗಾಗಿ, ಪ್ರಸಕ್ತ ವರ್ಷದಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಎರಡು ಬಾರಿ ಬಡ್ಡಿದರ ಕಡಿತಗೊಳಿಸಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. ಇದು ಹಳದಿ ಲೋಹದ ಬೆಲೆ ಏರಿಕೆಗೆ ಕಾರಣವಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸೌಮಿಲ್ ಗಾಂಧಿ ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,360 ಡಾಲರ್ (ಅಂದಾಜು ₹1.97 ಲಕ್ಷ) ಮತ್ತು 30.40 ಡಾಲರ್‌ನಂತೆ (ಅಂದಾಜು ₹2,540) ಮಾರಾಟವಾಗಿದೆ.