ಕಿತ್ತೂರು: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣದ ರಾಣಿ ಚನ್ನಮ್ಮ ಸರ್ಕಲ್ ನಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡ ಹಾಗೂ ಲಕ್ಷ್ಮೀ ಇನಾಮದಾರ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಇದೇ ವೇಳೆ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ದ್ವಿಚಕ್ರ ವಾಹನಕ್ಕೆ ಹಗ್ಗವನ್ನು ಕಟ್ಟಿ ಎಳೆಯುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.
ನಂತರ ರಾಣಿ ಚನ್ನಮ್ಮ ಸರ್ಕಲ್ ನಿಂದ ತಾಲೂಕು ಆಡಳಿತ ಸೌಧದವರೆಗೆ ಪಾದಯಾತ್ರೆ ಮೂಲಕ ತರಳಿ ತಾಲೂಕು ದಂಡಾಧಿಕಾರಿ ರವೀಂದ್ರ ಹಾದಿಮನಿ ಅವರ ಮೂಲಕ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡ ಮಾತನಾಡಿ, ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಕಾರಣ ರಾಜ್ಯದ ಜನರಿಗೆ ತೊಂದರೆ ಕೊಡಬೇಕು ಎಂಬ ದೃಷ್ಠಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ.
ಜಿಲ್ಲಾ ಮತ್ತು ತಾಲೂಕ್ ಪಂಚಾಯತ್ ಚುನಾವಣೆಗಳನ್ನು ಇನ್ನೂ 2-3 ವರ್ಷ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಇಲ್ಲ. ಅದಕ್ಕಾಗಿ ಈಗ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿದ್ದು ತಾವು ಕೊಟ್ಟ ಗ್ಯಾರಂಟಿಗಳನ್ನು ನೀಡುವ ಉದ್ದೇಶದಿಂದ ಹಣ ಸಂಗ್ರಹಿಸಲು ಬೆಲೆ ಏರಿಕೆ ಮಾಡಿ ರಾಜ್ಯದ ಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದಾರೆ ಎಂದರು.