ಬಾಗಲಕೋಟೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 29 ರಿಂದ ಎರಡು ದಿನಗಳ ಕಾಲ ನಡೆಯಲಿದೆ. ಈ ಬಾರಿ ಹತ್ತು ಪುಸ್ತಕಗಳ ಪ್ರಕಟಣೆಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಮುಂದಾಗಿದೆ. ಆದರೆ, 16 ತಿಂಗಳ ಹಿಂದೆ ನಡೆದಿದ್ದ ಸಮ್ಮೇಳನದಲ್ಲಿ ಘೋಷಿಸಿದ್ದ ಪುಸ್ತಕಗಳೇ ಹೊರ ಬಂದಿಲ್ಲ.
ಬೀಳಗಿಯಲ್ಲಿ ಅದ್ದೂರಿಯಾಗಿ ಸಮ್ಮೇಳನ ನಡೆದಿತ್ತು. ಸಮ್ಮೇಳನದಲ್ಲಿ ಪುಸ್ತಕಗಳ ಬಿಡುಗಡೆಯೂ ನಡೆದಿತ್ತು. ಬಿಡುಗಡೆಗಾಗಿ ಕೇವಲ ಐದು ಪ್ರತಿಗಳನ್ನು ತರಲಾಗಿತ್ತು. ನಂತರ ಅವುಗಳ ಪ್ರಕಟಣೆಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಸಕ್ತಿ ವಹಿಸಲಿಲ್ಲ.
ಬೀಳಗಿ ಸಮ್ಮೇಳನದಲ್ಲಿ ತಾಲ್ಲೂಕು ಮತ್ತು ಜಿಲ್ಲೆಯ ಸಮ್ಮೇಳನ ಅಧ್ಯಕ್ಷರ ಭಾಷಣ, ಜಿಲ್ಲೆಯ ಜನಪದ ಕತೆಗಳು, ಜಿಲ್ಲೆಯ ಮಕ್ಕಳ ಸಾಹಿತ್ಯದ ಪರಿಚಯ, ಜಿಲ್ಲೆಯ ರಂಗ ಪರಂಪರೆ, ಜಿಲ್ಲೆಯ ಆಯ್ದ ಕತೆಗಾರರ ಕತೆಗಳ, ತಿಂಗಳ ಅತಿಥಿ ಕಾರ್ಯಕ್ರಮ, ಮಹಿಳಾ ಸಾಹಿತ್ಯ ಅವಲೋಕನ, ಸಮ್ಮೇಳನದ ಸ್ಮರಣ ಸಂಚಿಕೆ ಸೇರಿದಂತೆ 10 ಪುಸ್ತಕಗಳ ಘೋಷಣೆ ಮಾಡಲಾಗಿತ್ತು.
ಬೀಳಗಿಯಲ್ಲಿ 2023ರ ಫೆ.23ರಂದು ಸಮ್ಮೇಳನ ನಡೆದಿತ್ತು. ಸಮ್ಮೇಳನ ನಡೆದು ಹದಿನಾಲ್ಕು ತಿಂಗಳುಗಳಾಗಿವೆ. ಆದರೆ, ಪುಸ್ತಕಗಳು ಮಾತ್ರ ಸಾಹಿತಿಗಳ, ಸಾಹಿತ್ಯಾಭಿಮಾನಿಗಳ ಕೈ ಸೇರಿಲ್ಲ. ಪುಸ್ತಕ ಕೇಳಲು ಹೋದವರಿಗೆ, ಇಂದು, ನಾಳೆ ಎಂದು ಕಳುಹಿಸುವ ಕೆಲಸ ನಡೆದುಕೊಂಡೇ ಬಂದಿದೆ.