ಇಳಕಲ್: ಇಲ್ಲಿಯ ಗೌಳೇರಗುಡಿ (ನವನಗರ ) ಯಲ್ಲಿ ವೈಯಕ್ತಿಕ ಶೌಚಾಲಯ ಹಾಗೂ ಸಾರ್ವಜನಿಕ ಶೌಚಾಲಯಗಳಿಲ್ಲ. ಹೀಗಾಗಿ ಬಹಿರ್ದೆಸೆಗೆ ತೊಂದರೆಯಾಗಿದೆ ಎಂದು ಪ್ಲಾಸ್ಟಿಕ್ ಚೊಂಬು (ತಂಬಿಗೆ) ಹಿಡಿದು ಮಹಿಳೆಯರು ಮಂಗಳವಾರ ಪ್ರತಿಭಟನೆ ಮಾಡಿದರು.
ಈವರೆಗೆ ನವನಗರದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುತ್ತಿದ್ದರು.
ಈಗ ಆ ಸ್ಥಳದ ಮಾಲೀಕ ಅಲ್ಲಿ ನಿವೇಶನಗಳನ್ನು ಮಾಡಿ, ಬೇಲಿ ಹಾಕಿದ್ದರಿಂದ ಬಹಿರ್ದೆಸೆಗೆ ಹೋಗಲು ತೊಂದರೆಯಾಗಿದೆ. ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದಾಗಿ ಬೇಸತ್ತು ಮಹಿಳೆಯರು ಪ್ಲಾಸ್ಟಿಕ್ ಚೊಂಬು ಹಿಡಿದು ಪ್ರತಿಭಟನೆಗೆ ಮುಂದಾದರು.
ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ, ನಗರಸಭೆ ಸದಸ್ಯೆ ರೇಶ್ಮಾ ಮಾರನಬಸರಿ, ಸುರೇಶ ಜಂಗ್ಲಿ ಅಮೃತ ಬಿಜ್ಜಳ, ಮೌಲಪ್ಪ ಬಂಡಿವಡ್ಡರ ಮತ್ತಿತರರು ಸ್ಥಳಕ್ಕೆ ಬಂದು ಮಹಿಳೆಯರ ಅಹವಾಲು ಆಲಿಸಿದರು. ‘ಬಯಲಿನಲ್ಲಿ ಬಹಿರ್ದೆಸೆಗೆ ಹೋಗುವುದು ಸರಿಯಲ್ಲ. ಇಲ್ಲಿ ಅಗತ್ಯ ಸಾರ್ವಜನಿಕ ಸುಲಭ ಶೌಚಾಲಯ ಹಾಗೂ ಪ್ರತಿ ಮನೆಗೂ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಇಳಕಲ್‌ನ ಗೌಳೇರಗುಡಿ (ನವನಗರ) ಯಲ್ಲಿ ಶೌಚಾಲಯಗಳ ನಿರ್ಮಾಣ ಮಾಡುವಂತೆ ಹಾಗೂ ಒಳಚರಂಡಿ ಕಲ್ಪಿಸುವಂತೆ ಆಗ್ರಹಿಸಿ ಮಂಗಳವಾರ ಮಹಿಳೆಯರು ಪ್ಲಾಸ್ಟಿಕ್ ಚೊಂಬು (ತಂಬಿಗೆ) ಹಿಡಿದು ಪ್ರತಿಭಟನೆ ಮಾಡಿದರು.