ಹುಬ್ಬಳ್ಳಿ, ಜೂನ್ 10: ಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿಜೆಪಿ ವಿಧಾನ ಪರಿಷತ್ ಉಪನಾಯಕ ಅರವಿಂದ್ ಬೆಲ್ಲದ್ ಅವರು ಸೇರಿದಂತೆ ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು, ಬಿಜೆಪಿ ಶಾಸಕರು ಸೇರಿದಂತೆ ಮೂವರ ವಿರುದ್ಧ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮೂಲಗಳ ಪ್ರಕಾರ ಜೀವ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಶಾಸಕ ಅರವಿಂದ್ ಬೆಲ್ಲದ್, ಉಪ ಮೇಯರ್ ಸತೀಶ ಹಾನಗಲ್ ಮತ್ತು ಲಕ್ಷ್ಮಣ ಭೋವಿ ವಿರುದ್ಧ ಪ್ರಕರಣ ದಾಖಲು . ಇವರು ಕೊಳಚೆ ನಿರ್ಮೂಲನ ಮಂಡಳಿ ನೀಡಿದ ಹಕ್ಕು ಪತ್ರ ವಿತರಣೆ ಕುರಿತು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅವರು ಜೀವ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಕೊಳಚೆ ನಿರ್ಮೂಲನ ಮಂಡಳಿ ಹಕ್ಕುಪತ್ರ ವಿತರಣೆ
ಕಳೆದ ವರ್ಷ 2023ರ ಡಿಸೆಂಬರ್ 30 ರಂದು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಂದು ಕೊರತೆ ಸಭೆ ನಡೆದಿತ್ತು. ಇಲ್ಲಿನ ಆನಂದ ನಗರದ ಕೃಷ್ಣಾ ಕಾಲೊನಿಗೆ ಸಂಬಂಧಪಟ್ಟ ಖಾಲಿ ಜಾಗವನ್ನು ಕೊಳಚೆ ನಿರ್ಮೂಲನ ಮಂಡಳಿ ಅಕ್ರಮವಾಗಿ ಹಕ್ಕುಪತ್ರ ವಿತರಿಸಿದೆ ಎಂಬ ದೂರು ಕೇಳಿ ಬಂದಿತ್ತು.
ಪರಶುರಾಮ ದಾವಣಗೆರೆ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹಿಂಪಡೆಯುವಂತೆ ಬೆದರಿಕೆ ಆರೋಪ ಮಾಡಲಾಗಿತ್ತು. ಆಗ ಲಕ್ಷ್ಮಣ ಭೋವಿ ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ದೂರು ನೀಡಲಾಗಿದೆ.