ಹಂದಿಗುಂದ: ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ, ಕಬ್ಬಿನ ಗದ್ದೆಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ನಡೆದಿದೆ.
ಸಮೀಪದ ಪಾಲಬಾವಿಯ ಮಹಾಲಿಂಗ ನಿಂಗನೂರ(47), ಈರಪ್ಪ ಉಗಾರೆ(32) ಮೃತಪಟ್ಟವರು.
ಈ ಘಟನೆಯಲ್ಲಿ ಇಮಾಮ್ ಸನದಿ ಅವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಚಿಕಿತ್ಸೆಗಾಗಿ ಹಾರೂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಸದ್ದಾಮ್ ಪಠಾಣ ಪರಾರಿಯಾಗಿದ್ದಾರೆ.
‘ವೇಗವಾಗಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ. ಕಾರಿನಲ್ಲಿದ್ದವರು ಪಾಲಬಾವಿಯಿಂದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ಹೋಗುತ್ತಿದ್ದರು. ಮಹಾಲಿಂಗ ಘಟನಾ ಸ್ಥಳದಲ್ಲೇ ಮೃತಪಟ್ಟರೆ, ಈರಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಾರೂಗೇರಿ ಠಾಣೆ ಸಿಪಿಐ ರವಿಚಂದ್ರನ ಬಡಪಕೀರಪ್ಪನವರ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಭೇಟಿ ನೀಡಿ ಪರಿಶೀಲಿಸಿದರು. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.