ಗುಳೇದಗುಡ್ಡ : ಕಾನನ ಮಧ್ಯದೊಳಗೊಂದು ನೀರಿನ ಆರ್ಭಟ. ಎತ್ತ ನೋಡಿದರು ಹಚ್ಚಹಸಿರಿನ ಸಿರಿ, ನಿಶಬ್ದ ವಾತಾವಾರಣ. ಇದು ಕಂಡು ಬರುವುದು ತಾಲೂಕಿನ ಹಾನಾಪುರ ಎಸ್‌ಪಿ ಗ್ರಾಮದ ಗುಡ್ಡದ ಹಾಲಹಂಡೆ ಜಲಪಾತದಲ್ಲಿ.
ಹಾನಾಪುರ ಎಸ್.ಪಿ. ಗ್ರಾಮದಿಂದ 1ಕಿಮೀ ದೂರದಲ್ಲಿರುವ ಈ ಹಾಲಹಂಡೆ ಜಲಪಾತ ನಿಜಕ್ಕೂ ಅಧ್ಭುತವಾಗಿದ್ದು, ಈ ಜಾಗಕ್ಕೆ ಭೇಟಿಕೊಟ್ಟರೇ ಸಾಕು ರಮಣೀಯ ದೃಶ್ಯವನ್ನು ಕಾಣಸಿಗಬಹುದು.
ಇಲ್ಲಿ ಸುಮಾರು 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಹಾಲಹಂಡೆ ಜಲಪಾತ ಈಗ ಪ್ರವಾಸಿಗರ ಗಮನ ಸೆಳೆದಿದೆ.
ಮಳೆಗಾಲದಲ್ಲಿ ತನ್ನ ಸೌಂದರ್ಯ ತೋರಿಸುವ ಈ ಜಲಪಾತ ಪ್ರಕೃತಿಯ ಮಡಿಲಲ್ಲಿದೆ. ಉತ್ತಮವಾಗಿ ಮಳೆಯಾದರೆ ಸಾಕು ಇದರ ವೈಯಾರ ಹೆಚ್ಚುತ್ತದೆ. ಪ್ರವಾಸಿಗರ ಕಣ್ಣಿಗೂ ಕಾಣದೇ ಇದ್ದ ಜಲಪಾತಕ್ಕೆ ಈಗ ಹೋಗಲು ಮಾರ್ಗವಿದೆ. ಕೆಳಗಡೆ ಈಜಲು ಹೊಂಡದಂತೆ ಸ್ಥಳವಿದೆ. ಜಲಪಾತ ಕಡೆ ಅಲ್ಲಲ್ಲಿ ಕೆಲವು ಬೃಹತ್ ಗಾತ್ರದ ಕಲ್ಲುಗಳಿದ್ದು, ನೀರಿನ ಕೆಳಗೆ ಕುಳಿತು ಜಪ ಮಾಡಲೆಂದು ಯಾರೊ ಹಾಕಿದ್ದಾರೇನು ಎನ್ನುವ ರೀತಿಯಲ್ಲಿಯೇ ಅವುಗಳು ಕಾಣಸಿಗುತ್ತವೆ.