ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮಂಗಳವಾರ(ಜೂನ್ 4) ಸಂಜೆ ತಡವಾಗಿ UGNEET-2024 ಫಲಿತಾಂಶ ಪ್ರಕಟಿಸಿದ್ದು, ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಗಳಿಸಿದ 67 ಟಾಪರ್‌ಗಳಲ್ಲಿ ರಾಜ್ಯದ ಮೂವರು ಇದ್ದಾರೆ.
ರಾಜ್ಯದ ಕಲ್ಯಾಣ್ ವಿ, ಸ್ಯಾಮ್ ಶ್ರೇಯಸ್ ಜೋಸೆಫ್ ಮತ್ತು ಅರ್ಜುನ್ ಕಿಶೋರ್ ಅವರು ಶೇ.
99.99 ಅಂಕ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಕರ್ನಾಟಕದಿಂದ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 89,088 ವಿದ್ಯಾರ್ಥಿಗಳು ಈ ವರ್ಷ ನೀಟ್‌ಗೆ ಅರ್ಹರಾಗಿದ್ದಾರೆ. ಕಳೆದ ವರ್ಷ ಕರ್ನಾಟಕದ 75,248 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು.
ಎನ್‌ಟಿಎ ಬಿಡುಗಡೆ ಮಾಡಿದ ಟಾಪ್ 100 ರ‍್ಯಾಂಕ್‌ಗಳಲ್ಲಿ ಕರ್ನಾಟಕದ ಐದು ಹುಡುಗರು ಮತ್ತು ಒಬ್ಬ ಹುಡುಗಿ ಸೇರಿದಂತೆ ಆರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಕಲ್ಯಾಣ್ ಅವರು ಬಿ ಫಾರ್ಮ್, ಫಾರ್ಮ್ ಡಿ, ಪಶುವೈದ್ಯಕೀಯ ವಿಜ್ಞಾನ ಮತ್ತು ನರ್ಸಿಂಗ್ ಸ್ಟ್ರೀಮ್‌ಗಳಲ್ಲಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿಇಟಿ) ಅಗ್ರಸ್ಥಾನ ಗಳಿಸಿದ್ದರು. ಇದರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಳೆದ ಶನಿವಾರ ಪ್ರಕಟಿಸಿತ್ತು. ಮೇ 5 ರಂದು ಬೆಂಗಳೂರು ಸೇರಿದಂತೆ ರಾಜ್ಯದ 29 ಜಿಲ್ಲಾ ಕೇಂದ್ರಗಳಲ್ಲಿ ಪದವಿ ಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನಡೆದಿತ್ತು