ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಹವಾಲಾ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ತಿಹಾರ್ ಜೈಲಿಗೆ ಶರಣಾಗಿದ್ದಾರೆ.
ಮನಿಲಾಂಡರಿಂಗ್ ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನು ಜೂನ್ 1 ರಂದು ಕೊನೆಗೊಂಡ ಹಿನ್ನಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ತಿಹಾರ್ ಜೈಲಿಗೆ ಬಂದು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಈ ಹಿಂದೆ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರ ನಡೆಸಲು ಅವರಿಗೆ ಜಾಮೀನು ನೀಡಲಾಗಿತ್ತು. ಇದೀಗ ಕೇಜ್ರಿವಾಲ್ ತಿಹಾರ್ ಜೈಲಿಗೆ ಬಂದು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಶರಣಾಗುವ ಮುನ್ನ ಕೇಜ್ರಿವಾಲ್ ಅವರು ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಬಳಿಕ ಕನ್ನಾಟ್ ನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮೊದಲು ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ, ”ನಾನು ಮತ್ತೆ ಜೈಲಿಗೆ ಹೋಗುತ್ತಿರುವುದು ಭ್ರಷ್ಟಾಚಾರದಲ್ಲಿ ತೊಡಗಿದ್ದಕ್ಕಾಗಿ ಅಲ್ಲ, ನಾನು ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ್ದರಿಂದ ಜೈಲಿಗೆ ಹೋಗುತ್ತಿದ್ದೇನೆ. ನನಗೆ ಸುಪ್ರೀಂ ಕೋರ್ಟ್ 21 ದಿನಗಳ (ಪರಿಹಾರ) ಅವಕಾಶ ನೀಡಿತು. ಈ 21 ದಿನಗಳು ಅವಿಸ್ಮರಣೀಯ. ನಾನು ಒಂದು ನಿಮಿಷವೂ ವ್ಯರ್ಥ ಮಾಡಲಿಲ್ಲ. ನಾನು ದೇಶವನ್ನು ಉಳಿಸಲು ಪ್ರಚಾರ ಮಾಡಿದ್ದೇನೆ.