ಬೆಂಗಳೂರು: ‘ಕರ್ನಾಟಕ ಬಿಡಿ, ಇಡೀ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ಕಳೆದ ಎರಡು – ಮೂರು ವರ್ಷಗಳಿಂದ ಸತತವಾಗಿ ಇಳಿಮುಖ ಆಗಿದೆ. ಹಾಗಾದರೆ ಇದಕ್ಕೆ ಯಾರು ಹೊಣೆʼ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ.
ಪಾಟೀಲ ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳೇ ದೇಶದಲ್ಲಿನ ಎಫ್‌ಡಿಐ ಒಳಹರಿವು ಕುಸಿದಿರುವುದರ ವಾಸ್ತವ ಚಿತ್ರಣ ನೀಡುತ್ತವೆ ಎಂದು ಸಚಿವರು ವಿವರಗಳನ್ನು ಹಂಚಿಕೊಂಡಿದ್ದಾರೆ. ʼದೇಶದಲ್ಲಿ ಎಫ್‌ಡಿಐ ಇಳಿಕೆ ಆಗಲು ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ, ದೋಷಪೂರಿತ ನೀತಿಗಳೇ ಕಾರಣ. ಹಾಗೆಯೇ ಜಾಗತಿಕ ವಿದ್ಯಮಾನಗಳು ಕೂಡ ಸೇರಿರಬಹುದು’ ಎಂದು ಅವರು ತಿಳಿಸಿದರು.
ಕುಸಿತದ ವಿವರಗಳು
ʼಹಣಕಾಸು ವರ್ಷ 2023ರಲ್ಲಿ 71 ಶತಕೋಟಿ ಡಾಲರ್‌ಗಳಷ್ಟಿದ್ದ ದೇಶಿ ಎಫ್‌ಡಿಐ, ಹಣಕಾಸು ವರ್ಷ 2024 ರಲ್ಲಿ 70 ಶತಕೋಟಿ ಡಾಲರ್‌ಗೆ ಕುಸಿದಿದೆ. ʼಹಣಕಾಸು ವರ್ಷ 2020-21ರಲ್ಲಿ ₹ 4.42 ಲಕ್ಷ ಕೋಟಿ, 2021-22ರಲ್ಲಿ ₹ 4.37 ಲಕ್ಷ ಕೋಟಿ, 2022-23ರಲ್ಲಿ ₹ 3.67 ಲಕ್ಷ ಕೋಟಿ ಮತ್ತು 2023-24ರಲ್ಲಿ ₹ 3.47 ಲಕ್ಷ ಕೋಟಿಗೆ ಇಳಿದಿದೆ. ಕಳೆದ 4 ವರ್ಷಗಳಲ್ಲಿ ಎಫ್‌ಡಿಐ ನಿರಂತರವಾಗಿ ಹೀಗೆ ಕುಸಿಯುತ್ತಲೇ ಸಾಗಿರುವುದರತ್ತ ಸಚಿವರು ಬೆಳಕು ಚೆಲ್ಲಿದ್ದಾರೆ.